ಸುಬ್ರಹ್ಮಣ್ಯ ಪೊಲೀಸ್ ಠಾಣಾ ಕಾಮಗಾರಿ ಶೀಘ್ರ ಪ್ರಾರಂಭ : ಗೃಹ ಸಚಿವ ಅರಗ ಜ್ಞಾನೇಂದ್ರ

ಕಡಬ: ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಲವರ್ಧನೆಗೆ ನಮ್ಮ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಸುಮಾರು ೧೦೦ ಪೊಲೀಸ್ ಠಾಣೆಗಳ ಹೊಸ ಕಟ್ಟಡವನ್ನು ೨೦೦ ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುವುದು. ಸುಬ್ರಹ್ಮಣ್ಯ ಪೊಲೀಸ್ ಠಾಣೆಗೂ ರೂ. ೧ ಕೋಟಿ ಅನುದಾನ ಇಡಲಾಗಿದೆ ಸದ್ಯದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

ಅವರು ಸೋಮವಾರ ರಾತ್ರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಬೇಟಿ ನೀಡಿ ಪತ್ರಕತ್ರರೊಂದಿಗೆ ಮಾತನಾಡಿದರು. ಪೊಲೀಸರಿಗೆ ಗೃಹ ೨೦-೨೫ ಯೋಜನೆಯಲ್ಲಿ ೨೦೨೫ನೇ ಇಸವಿವರೆಗೆ ೧೦ ಸಾವಿರ ಮನೆಗಳ ನಿರ್ಮಾಣವಾಗಲಿದೆ. ಅಲ್ಲಿಗೆ ವಸತಿಗಳ ಸಮಸ್ಯೆ ನಿವಾರಣೆಯಾಗುತ್ತದೆ. ಇಲಾಖೆಯಲ್ಲಿ ವಾರ್ಷಿಕ ೪ ಸಾವಿರ ನೇಮಕಾತಿ ನಡೆಸಲಾಗುತ್ತಿದೆ. ಈಗ ಕೇವಲ ೧೨ ಸಾವಿರ ಹುದ್ದೇಗಳು ಖಾಲಿ ಇವೆ ಎಂದರು.

ಗೋಹತ್ಯೆ ನಿಷೇಧ ಕಾಯಿದೆ ಈಗಾಗಲೇ ಜಾರಿಯಲ್ಲಿದ್ದು, ಹೊಸ ಕಾಯಿದೆಯಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ, ಸಾರ್ವಜನಿಕರೂ ಸಹಕರಿಸಬೇಕು. ಗ್ರೈನೇಟ್ ಪ್ರಕರಣ ಎಲ್ಲಾ ರೀತಿಯಲ್ಲೂ ತನಿಖೆ ನಡೆಯುತ್ತಿದೆ.ವೀರ ಸಾರ್ವರ್ಕರ್ ಬಹಳ ದೊಡ್ಡ ಸ್ವಾತಂತ್ರ್ಯ ಯೋಧ. ಅಂತಹವರ ಸ್ಮಾರಕ ಕಟ್ಟುವುದನ್ನು ವಿರೋಧಿಸುವುದು, ಅವರು ಈ ದೇಶದ ವ್ಯವಸ್ಥೆಯನ್ನೇ ವಿರೋದಿಸಿದಂತೆ. ಹೊಸ ಪೀಳಿಗೆಗೆ ಸಾರ್ವರ್ಕರ್ ಅಂತವರ ಬದುಕು ತಿಳಿಸುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ಇದನ್ನು ವಿರೋಧಿಸುತ್ತಿದೆ ಎಂದಾದರೆ ಜನ ಅವರನ್ನು ವಿರೋಧಿಸುತ್ತಾರೆ. ಯೋಗಿ ಆದಿತ್ಯನಾಥ್ ಅವರಿಗೆ ಮಹತ್ವದ ಸ್ಥಾನ ನೀಡಬಹುದೇ ಎಂಬ ಪ್ರಶ್ನೆಗೆ, ಅದು ಊಹೆಗೆ ನಿಲುಕದ್ದು, ಬಿಜೆಪಿಯಲ್ಲಿ ಯಾರಿಗೆ ಯಾವುದೇ ಸ್ಥಾನ ಸಿಗಬಹುದು. ಇಲ್ಲಿ ಸಾಮಾನ್ಯರಿಗೂ ಉನ್ನತ ಸ್ಥಾನ ಸಿಗುತ್ತಿದೆ ಎಂದರು.

ಪುನೀತ್ ಅಭಿಮಾನಿಗಳು ಆತ್ಮಹತ್ಯೆ ಮಾಡುಕೊಳ್ಳುತ್ತಿರುವುದು ಪರಿಹಾರವಲ್ಲ. ಪುನೀತ್ ರಾಜ್‌ಕುಮಾರ್ ಪ್ರಚಾರ ಪಡೆಯದೇ ಉತ್ತಮ ಕೆಲಸ ನಿರ್ವಹಸಿದ್ದಾರೆ. ಅಂತಹ ಕೆಲಸಗಳನ್ನು ನಾವೆಲ್ಲ ಮಾಡಿಕೊಂಡು ಪುನೀತ್ ಆತ್ಮಕ್ಕೆ ಶಾಂತಿ ಕೊಡಿಸುವ ಎಂದ ಅವರು ಯಾರೂ ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವಿ ಮಾಡಿಕೊಂಡರು.

 

Related Posts

Leave a Reply

Your email address will not be published.