ಪರಿಹಾರ ಮೊತ್ತವನ್ನು ಸಾಲಕ್ಕೆ ಜಮೆ ಮಾಡಿದ ಬ್ಯಾಂಕ್

ಸುರತ್ಕಲ್ ಸಮೀಪದ ಕುಳಾಯಿಯ (ಸದ್ಯ ಸೂರಿಂಜೆ ನಿವಾಸಿ) ಆಟೋ ಚಾಲಕ ಬಶೀರ್ ಮನೆ ಸಾಲದ ಮೇ ತಿಂಗಳ ಕಂತು ಕಟ್ಟಲು ಲಾಕ್ ಡೌನ್, ಕೊರೋನ ಬಿಕ್ಕಟ್ಟಿನಿಂದಾಗಿ ಅಸಾಧ್ಯವಾಗಿದ್ದು. ಸಾಲಕೊಟ್ಟ ಕೆನರಾ ಬ್ಯಾಂಕ್ ಬೈಕಂಪಾಡಿ ಬ್ರಾಂಚ್ ನ ಅಧಿಕಾರಿಗಳಲ್ಲಿ ಮೂರ್ನಾಲ್ಕು ತಿಂಗಳು ಕಂತು ಪಾವತಿಗೆ ವಿನಾಯತಿ ಕೇಳಿದ್ದು, ಅಲ್ಲಿ ಸಕಾರಾತ್ಮಕ ಸ್ಪಂದನೆ ಸಿಗದೆ ಅವರ ಖಾತೆಯಲ್ಲಿದ್ದ 27೦೦ ರೂಪಾಯಿಗಳನ್ನು ಹಾಗೂ ಆಟೋ ಚಾಲಕರಿಗೆ ಕೊರೋನ ಪರಿಹಾರವಾಗಿ ಸರಕಾರ ನೀಡಿದ 3೦೦೦ ರೂಪಾಯಿಗಳನ್ನು ಬ್ಯಾಂಕ್ ಸಾಲಕ್ಕೆ ಜಮಾ ಮಾಡಿದ್ದು, ಬ್ಯಾಂಕ್ ಖಾತೆಯಲ್ಲಿ ಉಳಿತಾಯವನ್ನು 00.೦೦ ಇಳಿಸಿದ್ದು. ಅದರಿಂದ ಕಂಗೆಟ್ಟು ಹೋದ, ವಯೋವೃದ್ದ ತಾಯಿ ಸಹಿತ ಆರು ಜನರ ಕುಟುಂಬ ಸಾಕುವ 49 ವರ್ಷದ ಬಶೀರ್ ರ ಸಂಕಟದ ಕತೆಯನ್ನು ಇಲ್ಲಿ ಬರೆದಿದ್ದೆ. ಅದೀಗ ಹಲವು ಬೆಳವಣಿಗೆಗಳನ್ನು ಕಂಡಿದೆ.

ಆಟೋ ಚಾಲಕ ಬಶೀರ್ ಕತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿದ್ದಂತೆ ಬ್ಯಾಂಕ್ ಗಳ ನಡವಳಿಕೆಯ ಕುರಿತು ದೊಡ್ಡ ಚರ್ಚೆಯನ್ನೇ ಅದು ಹುಟ್ಟುಹಾಕಿತು. ಹಿಂದು, ಇಂಡಿಯನ್ ಎಕ್ಸ್ ಪ್ರೆಸ್ ನಂತಹ (ಕನ್ನಡ ದಿನಪತ್ರಿಕೆಗಳು ಯಾಕೋ ಇದನ್ನು ಸುದ್ದಿಯಾಗಿ ಪರಿಗಣಿಸಲಿಲ್ಲ) ಪ್ರತಿಷ್ಟಿತ ಪತ್ರಿಕೆಗಳು ಆದ್ಯತೆಯ ಸುದ್ದಿಯಾಗಿ ಪ್ರಕಟಿಸಿದವು. ಬ್ಯಾಂಕ್ ಅಧಿಕಾರಿಗಳ ವಲಯದಲ್ಲೂ ಇದು ಬಿಸಿ ಬಿಸಿ ಚರ್ಚೆಗೆ ವಸ್ತುವಾಯಿತು., ಯೂನಿಯನ್ ಪದಾಧಿಕಾರಿಗಳು ಬಶೀರ್ ಗೆ ಹಾಗೂ ಈ ರೀತಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರದ (ರೀ ಷೆಡ್ಯೂಲ್ ಅವಕಾಶದ) ದಾರಿಗಳನ್ನು ವಿವರಿಸಿದರು. ಕೆನರಾ ಬ್ಯಾಂಕ್ ನ ಆಡಳಿತದ ನಡೆಯ ಕುರಿತು ಕಟು ಟೀಕೆಗಳೂ ವ್ಯಕ್ತವಾದವು.

ಇದೆಲ್ಲದರ ಭಾಗವಾಗಿ ಕೆನರಾ ಬ್ಯಾಂಕ್, ಸರಕಾರದ ಪರಿಹಾರವಾಗಿ ಬಂದಿದ್ದ ಮೂರು ಸಾವಿರ ರೂಪಾಯಿಗಳನ್ನು ಬಶೀರ್ ಖಾತೆಗೆ ಮರಳಿಸಿದೆ. ರೀಷೆಡ್ಯೂಲ್ ಆಫರನ್ನೂ ನೀಡಿದೆ. ಈ ಮಾಹಿತಿ ಇಲ್ಲದ ಉಳಿದ ದೊಡ್ಡ ಸಂಖ್ಯೆಯ ಸಾಲಗಾರರಿಗೂ ಇದರ ಲಾಭ ಸಿಕ್ಕಿದೆ. ಸರಕಾರ ಪರಿಹಾರವಾಗಿ ನೀಡಿದ ಮೊತ್ತವನ್ನು ಸಾಲಕ್ಕೆ ಮುರಿಯುವ ಕೆಟ್ಟ ಕ್ರಮಕ್ಕೂ ಕಡಿವಾಣ ಬಿದ್ದಿದೆ. ಇದು ಬಶೀರ್ ವಿಷಯವನ್ನು ಎತ್ತಿ ಮಾತಾಡಿದ್ದಕ್ಕೆ ನಾಗರಿಕರಿಗೆ ಸಿಕ್ಕಿದ ಜಯ.

ಇದಷ್ಟೆ ಅಲ್ಲದೆ ಇನ್ನೂ ಕೆಲವು ಮಾನವೀಯ ಬೆಳವಣಿಗೆಗಳು ಆಗಿವೆ. ನನ್ನ ಬರವಣಿಗೆಯ ಉದ್ದೇಶ ಬಶೀರ್ ಗೆ ಆರ್ಥಿಕ ಸಹಾಯ ಒದಗಿಸುವುದು ಆಗಿರಲಿಲ್ಲ.(ಎಷ್ಟು ಜನರಿಗೆ ಅಂತ ಆರ್ಥಿಕ ಸಹಾಯ ಒದಗಿಸಲು ಸಾಧ್ಯ) ಸ್ವಾಭಿಮಾನಿ ಬಶೀರ್ ಗೂ ಸಹಾಯ ಪಡೆಯುವ ಉದ್ದೇಶ ಇರಲಿಲ್ಲ. ವ್ಯವಸ್ಥೆಯ ಸಂವೇದನಾ ರಹಿತ ನಡೆ, ಸಾಲಗಾರರ ಕಷ್ಟಗಳನ್ನು ಎತ್ತಿ ತೋರಿಸುವುದು, ಸಾರ್ವಜನಿಕ ಒತ್ತಡ ಸೃಷ್ಟಿಸುವುದು ಅದರ ಉದ್ದೇಶ ಆಗಿತ್ತು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಡಿವೈಎಪ್‌ಯ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಬರೆದ ಪೋಸ್ಟ್‌ನ್ನು ಬೇರೆ ಬೇರೆ ಕಡೆ ನೋಡಿದ ಹಲವು ಸಹೃದಯಿಗಳು ಬಶೀರ್ ಗೆ ನೆರವು ಒದಗಿಸಲು ಮುಂದಾಗಿದ್ದಾರೆ. ಯಾವುದೇ ಪ್ರಚಾರ ಬಯಸದೆ ಒಂದಿಷ್ಟು ಮೊತ್ತ ಬಶೀರ್ ಕೈ ಗಿಟ್ಟಿದ್ದಾರೆ. ಅದರಲ್ಲೂ ಮುಖ್ಯವಾಗಿ ಪುಣೆಯ ವಿನುತಾ ಮಲ್ಯ  ಮತ್ತವರ ಗೆಳೆಯರು ಬಶೀರ್ ನ ಐದರಿಂದ ಆರು ತಿಂಗಳ ಮನೆ ಸಾಲದ ಕಂತು ಪಾವತಿಸಲು ನೆರವಾಗಲು ಮುಂದೆ ಬಂದಿದ್ದಾರೆ. (ಒಂದು ತಿಂಗಳ ಕಂತು ಸುಮಾರು 14,೦೦೦ ರೂಪಾಯಿ) ಅವರ ಕಾಳಜಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಕಡಿಮೆಯೆ. ಬಶೀರ್ ಈಗ ಮನೆ ಮಾರಾಟದ ಯೋಚನೆ ಕೈ ಬಿಟ್ಟಿದ್ದಾರೆ.

ಇದರಲ್ಲಿ ಗಮನಿಸಬೇಕಾದದ್ದು,ಬಡ ಮಸಲ್ಮಾನ ಬಶೀರ್ ನೆರವಿಗೆ ಬಂದವರೆಲ್ಲರೂ (ಬ್ಯಾಂಕ್ ಯೂನಿಯನ್ ನಾಯಕರಿಂದ ನಿಂದ ಹಿಡಿದು ಆರ್ಥಿಕ ನೆರವು ನೀಡಿದವರು) ಭಿನ್ನ ಧರ್ಮದ ಹಿನ್ನಲೆಯವರು. ಇವರಿಗೆಲ್ಲ ಕಂಡದ್ದು ಕೊರೋನ, ಲಾಕ್ ಡೌನ್ ನಿಂದ ಬಶೀರ್ ಕುಟುಂಬ ಅನುಭವಿಸುತ್ತಿರುವ ಕಷ್ಟಗಳು ಮಾತ್ರ. ಕಷ್ಟಕ್ಕೆ ಮಿಡಿಯಲು ಇಲ್ಲಿ ಧರ್ಮದ ಗುರುತುಗಳು ಅಡ್ಡಿಯಾಗಲಿಲ್ಲ. ಇದು ಇಂಡಿಯಾದ ಮಣ್ಣಿನಲ್ಲಿ ಆಳವಾಗಿ ಬೇರೂರಿರುವ ಸೌಹಾರ್ದತೆಯ, ಮಾನವೀಯ ಅಂತಕರಣದ ಒಂದು ಝಲಕ್. ಯಾವ ಸಂಘಟಿತ ರಾಜಕೀಯ ಪ್ರಯತ್ನದಿಂದಲೂ ಭಾರತದ ಈ ಗುಣ ಅಳಿಯುವುದಿಲ್ಲ. ಮಾನವೀಯತೆ ನಾಶವಾಗುವುದಿಲ್ಲ ಎಂದು ಮುನೀರ್ ಕಾಟಿಪಳ್ಳ ಅವರು ಅಭಿಪ್ರಾಯಪಟ್ಟಿದ್ದಾರೆ

 

Related Posts

Leave a Reply

Your email address will not be published.