ಹೆಜಮಾಡಿ ಗ್ರಾಮಸಭೆಯಲ್ಲಿ ಮೊಳಗಿದ ಅಕ್ರಮ ಮರಳುಗಾರಿಕೆ ಹಾಗೂ ಮಟ್ಕಾದಂಧೆ ವಿಚಾರ

ಉಡುಪಿ ಮಂಗಳೂರು ಗಡಿಭಾಗ ಹೆಜಮಾಡಿ ಗ್ರಾಮಸಭೆಯಲ್ಲಿ ಶಾಂಭವಿ ಹೊಳೆಯಲ್ಲಿ ರಾಜರೋಷವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಹಾಗೂ ಮಟ್ಕಾದಂಧೆಯ ವಿರುದ್ಧ ಜನ ಆಕ್ರೋಶ ವ್ಯಕ್ತ ಪಡಿಸಿದ್ದು, ಸಭೆಯಲ್ಲಿದ್ದ ಅಧಿಕಾರಿಗಳಲ್ಲಿ ತಕ್ಷಣವೇ ಇದಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ ಮಾಜಿ ಹೆಜಮಾಡಿ ಗ್ರಾ.ಪಂ. ಅಧ್ಯಕ್ಷ ವಾಮನ್ ಕೋಟ್ಯಾನ್, ಅವಳಿ ಜಿಲ್ಲೆಗಳ ಗಡಿಭಾಗ ಇದಾಗಿದ್ದು ದ.ಕ. ಜಿಲ್ಲಾ ಪರವಾನಿಗೆ ಪಡೆದಿರುವ ಮಂದಿ ಉಡುಪಿ ಜಿಲ್ಲಾ ವ್ಯಾಪ್ತಿಗೆ ಹೊರ ರಾಜ್ಯಗಳ ಕಾರ್ಮಿಕರನ್ನು ಅಕ್ರಮವಾಗಿ ಬಳಸಿಕೊಂಡು ರಾತ್ರಿ ಹಗಲೆನ್ನದೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ.

ಈ ಬಗ್ಗೆ ಅಂದಿನ ಜಿಲ್ಲಾಧಿಕಾರಿ ಜಗದೀಶ್‌ರವರಿಗೆ ಲಿಖಿತ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಬಗ್ಗೆ ಸ್ಥಳೀಯರಾದ ನಾವು ವಿರೋಧಿಸಿದರೆ ಮರಳುಗಾರಿಕೆ ನಡೆಸುವ ಮಂದಿ ಗೂಂಡಾಗಿರಿ ಪ್ರದರ್ಶಿಸುತ್ತಾರೆ. ಈ ಅಕ್ರಮ ಮರಳುಗಾರಿಕೆಯಿಂದಾಗಿ ಹೆಜಮಾಡಿ ಪ್ರದೇಶ ಹೊಳೆದಂಡೆ ಕುಸಿಯುತ್ತಿದೆ ಈ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯಿಸಿ ಕ್ರಮ ಕೈಗೊಳ್ಳುವಂತ್ತೆ ಗ್ರಾಮಸ್ಥರ ಪರವಾಗಿ ಆಗ್ರಹಿಸಿದ್ದಾರೆ. ಗ್ರಾಮಸ್ಥರ ಹಾಗೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಒಮ್ಮತದ ನಿರ್ಧಾರದ ಮೂಲಕ ಅಕ್ರಮ ಮರಳುಗಾರಿಕೆ

ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ಸಭೆಯಲ್ಲಿದ್ದ ನಿಷ್ಠಾವಂತ ಗಣಿ ಅಧಿಕಾರಿ ಸಂಧ್ಯಾ ಮೇಲಾಧಿಕಾರಿಗಳಿಗೆ ವರದಿ ನೀಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತ ಪಡಿಸಿದ್ದಾರೆ.

ಹೆದ್ದಾರಿಗಾಗಿ ಸ್ಥಳ ಕಳೆದುಕೊಂಡಿರುವ ಸಂತ್ರಸ್ಥರಿಗಾಗಿ ಕಳೆದ ಹತ್ತಾರು ವರ್ಷಗಳ ಹಿಂದೆ ನಿರ್ಮಿತಿ ಕೇಂದ್ರದ ಗುತ್ತಿಗೆದಾರಿಕೆಯಲ್ಲಿ ಮನೆನಿರ್ಮಾಣ ಕಾರ್ಯ ಆರಂಭಗೊಂಡಿದೆಯಾದರೂ ಆರಂಭಗೊಂಡಷ್ಟೇ ವೇಗವಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಗ್ರಾಮಸಭೆಯಲ್ಲಿ ಬಂದಿದ್ದ ಸಂತ್ರಸ್ಥರು ಮನೆ ನಿರ್ಮಿಸಿಕೊಡುವಂತೆ ಅತ್ತು ಗೊಳಾಡಿದರು. ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಗ್ರಾ.ಪಂ. ಆಡಳಿತ ಮಂಡಳಿ ಈ ಬಗ್ಗೆ ಕಾರ್ಯಚರಿಸುತ್ತಿದೆ ಶೀಘ್ರವಾಗಿ ಮನೆ ನಿರ್ಮಾಣ ಕೆಲಸ ಆರಂಭಗೊಳ್ಳಲಿದೆ ಎಂಬುದಾಗಿ ಅಧ್ಯಕ್ಷರು ಭರವಸೆ ವ್ಯಕ್ತ ಪಡಿಸಿದ್ದಾರೆ.

Related Posts

Leave a Reply

Your email address will not be published.