ಪುತ್ತೂರು: ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕೆಯ್ಯೂರು ಗ್ರಾಮದ ಮುಂಡೂರಿನಲ್ಲಿ ಮಹಿಳೆಗೆ ಬಸ್ ನಿಲ್ಲಿಸದ ಪ್ರಕರಣಕ್ಕೆ ಸಂಬಂಧಿಸಿ ಚಾಲಕನಿಗೆ ನೋಟಿಸ್ ನೀಡಲಾಗಿದೆ ಎಂದು ಕೆಎಸ್ಆರ್ಟಿಸಿ ಪುತ್ತೂರು ಡಿಪೋ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಕಾಶ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಕೇವಲ ನೋಟಿಸ್ ನೀಡಿದರೆ ಸಾಲದು. ಗ್ರಾಮೀಣ ಭಾಗದ ಮಹಿಳೆಯರೊಂದಿಗೆ ಚಾಲಕ-ನಿರ್ವಾಹಕರು ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಡೆಕಲ್ಲು ಸರ್ಕಾರಿ ಕಾಲೇಜಿಗೆ ಒಂದು ಬಸ್ ಮಾತ್ರ ಸಂಚರಿಸುತ್ತಿರುವ ಬಗ್ಗೆ ಚರ್ಚೆ ನಡೆದಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಲಾಯಿತು.

ಪುತ್ತೂರು ತಾಲೂಕಿನಲ್ಲಿ 446 ಯುವನಿಧಿ ಫಲಾನುಭವಿಗಳಿದ್ದಾರೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಂಜೂಷ ಮಾಹಿತಿ ನೀಡಿದರು. ಯುವನಿಧಿ ಪಡೆದು ಸಾಧನೆ ಮಾಡುತ್ತಿರುವ ಫಲಾನುಭವಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಂತೆ ಅಧ್ಯಕ್ಷರು ಸೂಚಿಸಿದರು.
ಅನ್ನಭಾಗ್ಯ ಅಕ್ಕಿಯ ಗುಣಮಟ್ಟ ಹಾಗೂ ಕೊರತೆ ಕುರಿತ ದೂರುಗಳ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಲಾಯಿತು. ಉಪ್ಪಿನಂಗಡಿ ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಮರುಪರಿಶೀಲನೆ ನಿಧಾನವಾಗಿರುವ ಬಗ್ಗೆಯೂ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.
ಗ್ಯಾರಂಟಿ ಸಮಿತಿ ಹಾಗೂ ಮೆಸ್ಕಾಂ ಸಲಹಾ ಸಮಿತಿ ಸದಸ್ಯರ ಸಭೆ ನಡೆಸಿ, ಗೃಹಜ್ಯೋತಿ ಮರುಪರಿಶೀಲನೆಗೆ ಬಾಕಿ ಇರುವ ಮನೆಗಳ ಮಾಹಿತಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ಯಾರಂಟಿ ಯೋಜನೆಗಳ ಪ್ರಗತಿಯ ವಿವರವನ್ನು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಸಭೆಗೆ ನೀಡಿದರು. ತಾಲೂಕು ಪಂಚಾಯತ್ ಯೋಜನಾಧಿಕಾರಿ ಶೋಭಾ ಸ್ವಾಗತಿಸಿ, ವಂದಿಸಿದರು.


