ಕೊನೆಗೂ ವೇತನ ನೀಡಿದ ಟಿಬಿಆರ್ ಕಂಪನಿ: ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಕೆಲಸಕ್ಕೆ ಹಾಜರಾದ ಸಿಬ್ಬಂದಿಗಳು
ವೇತನ ನೀಡಲು ವಿಳಂಬಿಸಿದ ಹೆಜಮಾಡಿ ಟೋಲ್ ಪ್ಲಾಜಾದ ಟಿಬಿಆರ್ ಕಂಪನಿಯ ನಿರ್ಲಕ್ಷ್ಯದ ವಿರುದ್ದ ತೊಂಭತ್ತಕ್ಕೂ ಅಧಿಕ ಸಿಬ್ಬಂದಿಗಳು ಸಿಡಿದ್ದೆದ್ದು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರ ನಡೆಸಿದ ಹಿನ್ನಲೆಯಲ್ಲಿ ಸರಿ ಸುಮಾರು ಇಪ್ಪತ್ತಾರು ಗಂಟೆಗಳ ಬಳಿಕ ವೇತನ ನೀಡುವ ಮೂಲಕ ಸಮಸ್ಯೆ ಬಗೆಹರಿದು ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಗುರುವಾರ ಮುಂಜಾನೆ ಎಂಟು ಗಂಟೆಗೆ ವೇತನಕ್ಕಾಗಿ ಮುಷ್ಕರ ಆರಂಭಿಸಿದ ಸಿಬ್ಬಂದಿಗಳನ್ನು ಕೆಲ ಅಧಿಕಾರಿಗಳು ಮನವೊಲಿಸಿ ಕರ್ತವ್ಯ ನಿರ್ವಹಿಸುವಂತೆ ಕೇಳಿಕೊಂಡಿದ್ದರಾದರೂ ತಿಂಗಳ ಹತ್ತನೇ ತಾರೀಕಿಗೆ ನೀಡ ಬೇಕಾಗಿದ್ದ ವೇತನ ಹದಿನೆಂಟು ತಾರೀಕು ಆದರೂ ನೀಡದ ಕಾರಣ ಮುಷ್ಕರ ಆರಂಭಿಸಿದ್ದರು. ಈ ಸಂದರ್ಭ ಸಿಬ್ಬಂದಿಗಳನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದ ಟಿಬಿಆರ್ ಕಂಪನಿಯ ಅಧಿಕಾರಿಗಳು ಕೆಲವು ಗಡುವು ನೀಡಿದರೂ ಅದನ್ನು ಪಾಲಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಮುಷ್ಕರ ಮುಂದುವರಿಸಿದ್ದು ಅಂತಿಮವಾಗಿ ಶುಕ್ರವಾರ ಸಂಜೆ 4-30ರ ಸುಮಾರಿಗೆ ವೇತನ ನೀಡುವ ಮೂಲಕ ಎರಡು ದಿನಗಳ ಕಾಲ ಮಡುಗಟ್ಟಿದ ಸಮಸ್ಯೆ ಇತ್ಯಾರ್ಥಗೊಂಡಿದೆ.