ಚಾಲಕನ ನಿಯಂತ್ರಣ ತಪ್ಪಿ ಆಳಕ್ಕೆ ಉರುಳಿದ ಗ್ಯಾಸ್ ಟ್ಯಾಂಕರ್
ವಿಟ್ಲ: ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ಕಳೆದು ಹೆದ್ದಾರಿಯ ಬದಿಯ 30 ಅಡಿ ಅಳಕ್ಕೆ ಉರುಳಿ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಸಂಭವಿಸಿದೆ.ಬೆಂಗಳೂರು ಕಡೆಯಿಂದ ಗ್ಯಾಸ್ ಖಾಲಿ ಮಾಡಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಘಟನೆಯಿಂದ ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಪ್ರಪಾತದಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿದ್ದು, ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಮಾಣಿ- ಬುಡೋಳಿ ರಸ್ತೆ ಬದಿಯಲ್ಲಿ ಹಲವು ಮೃತ್ಯುಕೂಪ ರೀತಿಯ ಹೊಂಡಗಳು ಬಾಯ್ತೆರೆದು ನಿಂತಿದೆ. ಇದೇ ಪ್ರಪಾತಕ್ಕೆ ಕಳೆದ ಹಲವಾರು ವರ್ಷಗಳಿಂದ ವಾಹನಗಳು ಉರುಳುತ್ತಿದೆ. ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಬಿ.ಸಿ ರೋಡ್ ಅಡ್ಡಹೊಳೆ ಕಾಮಗಾರಿ ನಡೆಯುತ್ತಿದ್ದು, ವಾಹನ ಚಾಲಕರಲ್ಲಿ ಹೊಸ ಭರವಸೆ ಮೂಡಿದೆ.