ಬಿ.ಸಿ.ರೋಡು-ಪುಂಜಾಲಕಟ್ಟೆ ರಸ್ತೆ ಅಗಲೀಕರಣ: ಹಲವಾರು ಸಮಸ್ಯೆಗಳು ಸೃಷ್ಠಿ

ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ರಸ್ತೆ ಅಗಲೀಕರಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಮಳೆಗಾಲದ ಈ ಸಮಯದಲ್ಲಿ ರಸ್ತೆ ಅಭಿವೃದ್ದಿಯಿಂದಾಗಿ ಹಲವರು ಸಮಸ್ಯೆಗಳು ತಲೆದೋರಿವೆ. ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೇಗೇಟು ಬಳಿ ಮನೆಯಂಗಳವೇ ನೀರು ಹರಿದು ಹೋಗುವ ಚರಂಡಿಯಾಗಿ ಪರಿವರ್ತನೆಯಾದರೆ, ರಸ್ತೆ ಪಕ್ಕದ ಅಡಿಕೆ ತೋಟದಲ್ಲಿ ನೀರು ತುಂಬಿ ಕೊಂಡು ಕೃಷಿ ನಾಶವಾಗುವ ಭೀತಿ ಎದುರಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿ ಮನೆ ಅಂಚಿನವರೆಗೂ ಸಾಗಿದ್ದು ತಡೆಗೋಡೆ ನಿರ್ಮಿಸಿ ಕೊಡುವ ಭರವಸೆ ಹುಸಿಯಾಗಿದೆ.


ರಾ.ಹೆದ್ದಾರಿ ಪಕ್ಕದಲಿರುವ ಮನೆಗಳ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಒಂದೆಡೆ ರಸ್ತೆಗಾಗಿ ತಮ್ಮ ಜಮೀನಿನನ್ನು ಕಳಕೊಂಡರೆ, ಇನ್ನೊಂದೆಡೆ ಪರಿಹಾರ ಮೊತ್ತವೂ ಸಿಗದೆ ಸಂತ್ರಸ್ತರು ಹೈರಾಣಾಗಿದ್ದಾರೆ.
ರಾ. ಹೆದ್ದಾರಿ ಅಭಿವೃದ್ದಿ ಕಾಮಗಾರಿಯಿಂದಾಗಿ ನಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಪಕ್ಕದ ಅನೇಕ ಮನೆಗಳಿಗೆ ತೊಂದರೆ ಉಂಟಾಗಿದೆ. ಇಲ್ಲಿನ ಹಳೆಗೇಟು ಎಂಬಲ್ಲಿ ವಿಶ್ವನಾಥ ಎಂಬವರ ಮನೆ ಅಂಗಳಕ್ಕೆ ಮಳೆ ನೀರೆಲ್ಲ ಹರಿದು ಬರುತ್ತಿದೆ. ಈ ನೀರು ಪಕ್ಕದ ಯೋಗೀಶ್ ಗೌಡ ಎಂಬವರ ತೋಟದಲ್ಲಿ ತುಂಬಿಕೊಂಡು ಅಡಿಕೆ ಕೃಷಿ ನಾಶವಾಗುವ ಆತಂಕ ಉಂಟಾಗಿದೆ. ಜಯರಾಮ್ ಹಾಗೂ ಗಣೇಶ್ ಎಂಬವರ ಮನೆ ಹಾಗೂ ದನದ ಹಟ್ಟಿಗೆ ತಾಗಿಕೊಂಡೇ ರಸ್ತೆ ನಿರ್ಮಿಸಲಾಗುತ್ತಿದೆ. ರಸ್ತೆಯಂಚಿನಲ್ಲೇ ಈ ಮನೆಗಳಿದ್ದರೂ ಇವುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿಲ್ಲ. ಇದರಿಂದಾಗಿ ಮನೆಗಳು ತೆರವಾಗದೇ ಉಳಿದಿದ್ದು ರಾಷ್ಟ್ರೀಯ ಹೆದ್ದಾರಿಯಿಂದ ಇಂತಿಷ್ಟು ಮೀಟರ್ ದೂರದಲ್ಲಿ ವಾಸ್ತವ್ಯದ ಮನೆಗಳಿರಬೇಕು ಎನ್ನುವ ನಿಯಮವೂ ಇಲ್ಲಿ ಪಾಲನೆಯಾಗಿಲ್ಲ. ಮನೆಗೆ ತಾಗಿಕೊಂಡೇ ರಸ್ತೆ ನಿರ್ಮಾಣ ಗೊಂಡಿರುವುದರಿಂದ ಚರಂಡಿಯೂ ಇಲ್ಲದೆ ಮಳೆ ನೀರೆಲ್ಲಾ ಮನೆ ಅಂಚಿಗೆ ಇಂಗುತ್ತಿದೆ. ನೀರು ಹರಿದು ಹೋಗಲು ತೋಡೊಂದಕ್ಕೆ ಮೇಲ್ಭಾಗದಲ್ಲೇ ಮೋರಿ ಅಳವಡಿಸಲಾಗಿದ್ದು ನೀರೆಲ್ಲಾ ಖಾಸಗಿ ಜಮೀನಿಗೆ ತುಂಬಿಕೊಳ್ಳುತ್ತಿದೆ.

 


ಪರಿಹಾರ ಸಿಕ್ಕಿಲ್ಲ:
ಬಿ.ಸಿ.ರೋಡು- ಪುಂಜಾಲಕಟ್ಟೆ ರಾ. ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದಾಗಿ ನಾವೂರು ಗ್ರಾ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೩೨ ಮಂದಿ ಜಮೀನು ಸಂತ್ರಸ್ತರು ಇದ್ದು ಈ ಪೈಕಿ ಇಬ್ಬರನ್ನು ಹೊರತು ಪಡಿಸಿ ಉಳಿದ ಯಾರಿಗೂ ಪರಿಹಾರ ಮೊತ್ತ ಸಿಕ್ಕಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಇಲ್ಲಿನ ಶಾಂಬವಿ ಸದಾನಂದ ಎಂಬವರ ೦.೦೫ ಗುಂಟೆ ಜಮಿನಿಗೆ ಪರಿಹಾರ ಕೋರಿ ಇಲಾಖೆಯ ಸೂಚನೆಯಂತೆ 2020ಸೂಚನೆ ನೀಡಿದ್ದರೆ. ಇವರಿಗೆ ಸೇರಿದ ಜಮೀನಿನಲ್ಲಿ ಈಗಾಗಲೇ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಪರಿಹಾರ ಮೊತ್ತ ಕೈ ಸೇರಿಲ್ಲ ಎಂದು ಅವರು ಆರೋಪಿಸಿದ್ದಾರೆ. ತಾವು ಕಳಕೊಂಡ ತಮ್ಮ ಜಮೀನಿಗೆ ಪರಿಹಾರ ಪಡೆಯಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಮೀಷನ್ ನೀಡಬೇಕೆನ್ನುವ ದೂರುಗಳು ಕೇಳಿ ಬಂದಿದೆ. ಒಟ್ಟು ಸಮಸ್ಯೆಯ ಬಗ್ಗೆ ಈಗಾಗಲೇ ಸಂಸದರು ಹಾಗೂ ಶಾಸಕರಿಗೆ ಲಿಖಿತ ಮನವಿ ಸಲ್ಲಿಸಲಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಸಂಸದರು ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.
ಜಮೀನಿಗೆ ಬೇಲಿ ಹಾಕಲು ನಿರ್ಧಾರ
ರಸ್ತೆ ಅಭಿವೃದ್ಧಿಗಾಗಿ ತಮ್ಮ ಜಮೀನನ್ನು ನೀಡಿದ ತಪ್ಪಿಗಾಗಿ ಈಗ ಜಮೀನು ಇಲ್ಲ, ಪರಿಹಾರವೂ ಇಲ್ಲ ಎನ್ನುವ ಆತಂಕ ನಾವೂರು ಗ್ರಾಮದ ಸಂತ್ರಸ್ತರನ್ನು ಕಾಡಲಾರಂಭಿಸಿದೆ. ಮುಂದಿನ ಎರಡು ವಾರದೊಳಗಾಗಿ ಸಂಬಂಧಪಟ್ಟ ಇಲಾಖೆ ಜಮೀನು ಕಳಕೊಂಡ ಎಲ್ಲಾ ಭೂ ಮಾಲೀಕರಿಗೆ ಭೂ ಪರಿಹಾರ ನೀಡಬೇಕು, ತಪ್ಪಿದ್ದಲ್ಲಿ ಈಗಾಗಲೇ ರಸ್ತೆ ನಿರ್ಮಾಣಗೊಂಡಿರುವ ತಮ್ಮ ಜಮೀನಿಗೆ ಬೇಲಿ ಹಾಕುವುದಾಗಿ ಸ್ಥಳೀಯ ಸಂತ್ರಸ್ತ ಭೂ ಮಾಲಿಕರು ಎಚ್ಚರಿಸಿದ್ದಾರೆ. ಪರಿಹಾರ ಮೊತ್ತ ಪಾವತಿಸಿದ ಬಳಿಕವೇ ಬೇಲಿ ತೆರವಿಗೊಳಿಸುವುದಾಗಿ ತಿಳಿಸಿದ್ದಾರೆ.

 

Related Posts

Leave a Reply

Your email address will not be published.