ಜಲಸಂಪನ್ಮೂಲ ಖಾತೆ ವಹಿಸಿಕೊಳ್ಳಲು ನಿರಾಕರಿಸಿರುವ ರಾಮಲಿಂಗಾರೆಡ್ಡಿ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ತೊರೆಯುವುದಿಲ್ಲ. ಸಚಿವ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.ಸಿಎಂಗೆ ಬರೆದಿರುವ ಪತ್ರದಲ್ಲಿ, ‘ತಮ್ಮ ಸಚಿವ ಸಂಪುಟದಲ್ಲಿ ಸ್ಥಾನಾ ನೀಡಿದ್ದಕ್ಕೆ ತಮಗೂ, ಕಾಂಗ್ರೆಸ್ ಪಕ್ಷಕ್ಕೂ ಧನ್ಯವಾದಗಳು. ಆತ್ಮಸಾಕ್ಷಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ‘ ಎಂದು ತಿಳಿಸಿದ್ದಾರೆ.
2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಬೆಂಗಳೂರು ಅಭಿವೃದ್ಧಿ ಕೊಡುವುದಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಡಿಕೆಶಿ ಅವರು ಬಿಟ್ಟುಕೊಡುವಂತೆ ಕೋರಿದ್ದಲ್ಲದೇ, ತಾವು ಮುಖ್ಯಮಂತ್ರಿಯಾದ ಬಳಿಕ ಆ ಖಾತೆ ನೀಡುವುದಾಗಿ ವಾಗ್ದಾನ ಮಾಡಿದ್ದರು. ಈಗ ಮಾತಿಗೆ ತಪ್ಪಿದ್ದಾರೆ ಎಂದು ರಾಮಲಿಂಗಾರೆಡ್ಡಿ ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು.


