ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಕ್ರೀಡಾಕೂಟದ ಆರಂಭಿಕ ದಿನಗಳಲ್ಲೇ ಭಾರತವು 2 ಚಿನ್ನ, 5 ಬೆಳ್ಳಿ ಹಾಗೂ 3 ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ವೇಟ್ಲಿಫ್ಟಿಂಗ್ ಮತ್ತು ಪ್ಯಾರಾ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಭಾರತೀಯ ಕ್ರೀಡಾಪಟುಗಳು ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ.

ಮೀರಾಬಾಯಿ ಚಾನು ಮಹಿಳೆಯರ 48 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಇದು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಅವರ ಸತತ ಮೂರನೇ ಚಿನ್ನದ ಪದಕವಾಗಿದೆ.ಮತ್ತೊಂದೆಡೆ, ಪ್ಯಾರಾ ಅಥ್ಲೆಟಿಕ್ಸ್ನ ಮಹಿಳೆಯರ ಶಾಟ್ಪುಟ್ F57 ವಿಭಾಗದಲ್ಲಿ ಶರ್ಮಿಳಾ ಧಂಕರ್ ಚಿನ್ನದ ಪದಕ ಮುಡಿಗೇರಿಸಿಕೊಂಡು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ.

ಭಾರತ ಗೆದ್ದಿರುವ 5 ಬೆಳ್ಳಿ ಪದಕಗಳಲ್ಲಿ 4 ಪದಕಗಳು ವೇಟ್ಲಿಫ್ಟಿಂಗ್ನಲ್ಲೇ ಬಂದಿರುವುದು ವಿಶೇಷ.

ರಿಷಿಕಾಂತ ಸಿಂಗ್ (ಪುರುಷರ 60 ಕೆಜಿ ವೇಟ್ಲಿಫ್ಟಿಂಗ್), ಮುತ್ತುಪಾಂಡಿ ರಾಜ (ಪುರುಷರ 65 ಕೆಜಿ ವೇಟ್ಲಿಫ್ಟಿಂಗ್), ಜ್ಞಾನೇಶ್ವರಿ ಯಾದವ್ (ಮಹಿಳೆಯರ 53 ಕೆಜಿ ವೇಟ್ಲಿಫ್ಟಿಂಗ್) ವಲ್ಲೂರಿ ಅಜಯ್ ಬಾಬು (ಪುರುಷರ 79 ಕೆಜಿ ವೇಟ್ಲಿಫ್ಟಿಂಗ್), ಸರ್ವೇಶ್ ಕುಶಾರೆ (ಪುರುಷರ ಹೈಜಂಪ್ – ಅಥ್ಲೆಟಿಕ್ಸ್)

ಈ ಬಾರಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದು ಪ್ಯಾರಾ ಪವರ್ಲಿಫ್ಟರ್ ಝಂಡು ಕುಮಾರ್. ಅವರು ಪುರುಷರ ಹೆವಿವೈಟ್ ಪ್ಯಾರಾಲಿಫ್ಟಿಂಗ್ ವಿಭಾಗದಲ್ಲಿ ಕಂಚು ಗೆದ್ದು ಸಾಧನೆಗೆ ನಾಂದಿ ಹಾಡಿದರು.
ಇವರ ಜೊತೆಗೆ ಮಹಿಳೆಯರ 58 ಕೆಜಿ ವೇಟ್ಲಿಫ್ಟಿಂಗ್ನಲ್ಲಿ ಬಿಂದ್ಯಾರಾಣಿ ದೇವಿ ಹಾಗೂ ಮಹಿಳೆಯರ ಶಾಟ್ಪುಟ್ F57 ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಶಿಲ್ಪಾ ಕೆ. ಶೈಲಾ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.


