ಮಂಗಳೂರು: ಊರಿನವರ ನೂರಾರು ಕನಸುಗಳನ್ನು ಹೊತ್ತು, ದಾರಿದೀಪವಾಗಬೇಕಿದ್ದ ಆ ಬಸ್ ನಿಲ್ದಾಣ ಕಳೆದ ಕೆಲವು ಸಮಯಗಳಿಂದ ನಗರ ಪಾಲಿಕೆಯ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದ ಕಥೆಯನ್ನಷ್ಟೇ ಹೇಳುತ್ತಿತ್ತು! ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಾವೂರು ಜ್ಯೋತಿನಗರದ ಬಸ್ ತಂಗುದಾಣವದು. ನಿರ್ವಹಣೆಯಿಲ್ಲದೆ ಸೊರಗಿಹೋಗಿದ್ದ ಬಸ್ ನಿಲ್ದಾಣ ಅಕ್ಷರಶಃ ಶಾಪಗ್ರಸ್ಥವಾಗಿತ್ತು.

ನಿಲ್ದಾಣದ ಸುತ್ತಮುತ್ತ ಬೆಳೆದು ನಿಂತ ದಟ್ಟವಾದ ಹುಲ್ಲು ಮತ್ತು ಗಿಡಮರಗಳು, ಒಳಗೆ ಕಾಲಿಡಲು ಅಸಾಧ್ಯವಾಗುವಂತೆ ಗಬ್ಬೆದ್ದು ನಾರುತ್ತಿದ್ದ ಪರಿಸ್ಥಿತಿ. ಪಕ್ಕದ ಫುಟ್ ಪಾತ್ ಅಕ್ರಮಿಸಿಕೊಂಡಿದ್ದ ಗಿಡಗಂಟಿಗಳು, ಪ್ರಯಾಣಿಕರು ಬಸ್ಸಿಗೆ ಕಾಯಲು ನೆರಳು ನೀಡಬೇಕಿದ್ದ ಆ ತಾಣ, ಸಂಜೆ ಕತ್ತಲಾಗುತ್ತಿದ್ದಂತೆ ಕುಡುಕರು ಹಾಗೂ ಅಲೆಮಾರಿಗಳ ಅಡ್ಡೆಯಾಗುತ್ತಿತ್ತು. ಬಸ್ಸಿಗಾಗಿ ನಿಲ್ಲಬೇಕಿದ್ದ ಹಿರಿಯರು, ಹೆಣ್ಣುಮಕ್ಕಳು ಹಾಗೂ ಶಾಲಾ ಮಕ್ಕಳು ಭಯದಲ್ಲೇ ಬಿಸಿಲು-ಮಳೆಯಲ್ಲಿ ಹೊರಗಡೆ ನಿಲ್ಲುವ ದುಸ್ಥಿತಿ ನಿರ್ಮಾಣವಾಗಿತ್ತು.

ಸಾರ್ವಜನಿಕರ ಕರೆಗೆ ಒಗ್ಗಟ್ಟಾದ “ಮೀಡಿಯಾ ಮನಸುಗಳು”!
ಈ ಅಧೋಗತಿಗೆ ಒಳಗಾದ ಬಸ್ ನಿಲ್ದಾಣದ ನೋವನ್ನು ಕಣ್ಣಾರೆ ಕಂಡ ಸ್ಥಳೀಯ ಸಾರ್ವಜನಿಕರೊಬ್ಬರು ಸಮಸ್ಯೆಯನ್ನು ಪರಿಹರಿಸುವಂತೆ ಮಂಗಳೂರಿನ “ಮೀಡಿಯಾ ಮನಸುಗಳು” ತಂಡವನ್ನು ಸಂಪರ್ಕಿಸಿದ್ದರು. ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟು ವಸ್ತುಸ್ಥಿತಿ ಅರಿತುಕೊಂಡ ತಂಡವು ತಡಮಾಡದೆ ಕಾವೂರು ಜ್ಯೋತಿನಗರಕ್ಕೆ ದೌಡಾಯಿಸಿತ್ತು.
ಕೈಯಲ್ಲಿ ಪೊರಕೆ, ಕಳೆ ಕತ್ತುವ ಸಲಕರಣೆಗಳನ್ನು ಹಿಡಿದು ಬಂದ ತಂಡದ ಸದಸ್ಯರು, ಸ್ವತಃ ತಮ್ಮ ಕೈಯಿಂದಲೇ ನಿಲ್ದಾಣದ ಕಳೆ ಕೀಳುವ ಮತ್ತು ಸ್ವಚ್ಛಗೊಳಿಸುವ ಕಾಯಕಕ್ಕೆ ಮುಂದಾದರು. ಗಿಡಗಂಟಿಗಳಿಂದ ಮುಚ್ಚಿಹೋಗಿದ್ದ ಬಸ್ ನಿಲ್ದಾಣ ಪರಿಸರವನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಸ್ವಚ್ಛಗೊಳಿಸಿ ಕಣ್ಣಿಗೆ ಮುದ ನೀಡುವಂತೆ ತೊಳೆದು ಸಾರ್ವಜನಿಕ ಬಳಕೆಗೆ ಯೋಗ್ಯವನ್ನಾಗಿಸಿದರು.
ಬಸ್ ಪ್ರಯುಣಿಕರಿಂದ ಕೃತಜ್ಞತೆ:
ಅನಾಥವಾಗಿದ್ದ ಬಸ್ ನಿಲ್ದಾಣಕ್ಕೆ ಹೊಸ ಜೀವ ತುಂಬಿದ ಈ ಸೇವಾ ಕಾರ್ಯದಲ್ಲಿ “ಮೀಡಿಯಾ ಮನಸುಗಳು” ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಬಾಲಕೃಷ್ಣ ಶೆಟ್ಟಿ, ಸಂದೇಶ್ ಶೆಟ್ಟಿ, ಶಿವು ಕುಲಾಲ್, ಗಿರೀಶ್ ಮಣೇಲ್ ಹಾಗೂ ಅನೂಪ್ ಸೂರಿಂಜೆ ಅವರು ಸಕ್ರಿಯವಾಗಿ ಪಾಲ್ಗೊಂಡು ಯುವ ಸಮುದಾಯಕ್ಕೆ ಮಾದರಿಯಾದರು.
ದಪ್ಪ ಚರ್ಮದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಲುಗಿದ್ದ ಸ್ಥಳದಲ್ಲಿ ಇಂದು ಸ್ವಚ್ಛವಾಗಿರುವ ಬಸ್ ನಿಲ್ದಾಣವನ್ನು ಕಂಡು ಸ್ಥಳೀಯರು ಮತ್ತು ಬಸ್ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮ ಕಷ್ಟಕ್ಕೆ ಸ್ಪಂದಿಸಿ, ಸ್ವಾರ್ಥರಹಿತ ಸೇವೆ ನೀಡಿದ “ಮೀಡಿಯಾ ಮನಸುಗಳು” ಬಳಗಕ್ಕೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ. ಸ್ಥಳೀಯ ಮಾತೃಶ್ರೀ ಹೋಟೆಲ್ ನ ಮಾಲಕರಾದ ಯತಿರಾಜ್ ಶೆಟ್ಟಿ ಅವರು ಸ್ವಚ್ಛತಾ ಕಾರ್ಯಕ್ಕೆ ನೀರಿನ ವ್ಯವಸ್ಥೆ ಮಾಡಿಕೊಡುವ ಮೂಲಕ ನೆರವಾಗಿದ್ದಾರೆ.
ಜವಾಬ್ದಾರಿಯುತ ಆಡಳಿತ ವ್ಯವಸ್ಥೆ ಸಮಸ್ಯೆಯನ್ನು ಕಂಡೂ ಕಣ್ಣು ಮುಚ್ಚಿಕೊಂಡಾಗ, ಸಮಾಜಮುಖಿ ಯುವಕರ ತಂಡ ಒಗ್ಗಟ್ಟಾದಾಗ ಹೇಗೆ ಬದಲಾವಣೆ ತರಬಲ್ಲುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ.

