ಉಚ್ಚಿಲ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ವತಿಯಿಂದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಲಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವ–2026ರ ಅಂಗವಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕುಸ್ತಿಪಟುಗಳನ್ನು ಒಳಗೊಂಡ ಕುಸ್ತಿ ಪಂದ್ಯಾಕೂಟವನ್ನು ಆಯೋಜಿಸಲಾಗಿದೆ.
ಉಭಯ ಜಿಲ್ಲೆಗಳಲ್ಲಿ ಕುಸ್ತಿ ಕ್ರೀಡೆಯನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಿರುವ ಈ ಪಂದ್ಯಾಕೂಟದಲ್ಲಿ ಪುರುಷರ ವಿಭಾಗದಲ್ಲಿ “ಉಚ್ಚಿಲ ದಸರಾ ಕೇಸರಿ”, “ಉಚ್ಚಿಲ ದಸರಾ ಕುಮಾರ್” ಹಾಗೂ ಮಹಿಳೆಯರ ವಿಭಾಗದಲ್ಲಿ “ಉಚ್ಚಿಲ ದಸರಾ ಕುವರಿ” ಪ್ರಶಸ್ತಿ ವಿಭಾಗಗಳೊಂದಿಗೆ ವಿವಿಧ ದೇಹತೂಕದ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಅಕ್ಟೋಬರ್ 13ರಂದು ಬೆಳಿಗ್ಗೆ 8 ಗಂಟೆಯಿಂದ ಕುಸ್ತಿ ಪಂದ್ಯಾಕೂಟ ನಡೆಯಲಿದೆ.
ಪುರುಷರ ಉಚ್ಚಿಲ ದಸರಾ ಕುಮಾರ್ ವಿಭಾಗದಲ್ಲಿ 34ರಿಂದ 38, 41, 46, 50, 57, 61 ಹಾಗೂ 65 ಕೆ.ಜಿ. ತೂಕದ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಉಚ್ಚಿಲ ದಸರಾ ಕೇಸರಿ ವಿಭಾಗದಲ್ಲಿ 74, 86 ಹಾಗೂ 86ರಿಂದ 97 ಕೆ.ಜಿ. ತೂಕದ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಮಹಿಳೆಯರ ಉಚ್ಚಿಲ ದಸರಾ ಕುವರಿ ವಿಭಾಗದಲ್ಲಿ 32ರಿಂದ 36, 43, 46, 53, 59, 65, 68 ಹಾಗೂ 68ರಿಂದ 76 ಕೆ.ಜಿ. ತೂಕದ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧಾಳುಗಳ ದೇಹತೂಕ ಪರೀಕ್ಷೆಯನ್ನು ಅಕ್ಟೋಬರ್ 12ರಂದು ಮಧ್ಯಾಹ್ನ 2.30ರಿಂದ ಸಂಜೆ 6 ಗಂಟೆಯವರೆಗೆ ನಡೆಸಲಾಗುವುದು. ನಿಗದಿತ ಸಮಯದ ಬಳಿಕ ಆಗಮಿಸುವ ಸ್ಪರ್ಧಾಳುಗಳ ತೂಕ ಪರೀಕ್ಷೆ ನಡೆಸಲಾಗುವುದಿಲ್ಲ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿರುವ ಕುಸ್ತಿಪಟುಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು, ದೇಹತೂಕ ಪರೀಕ್ಷೆಯ ಸಂದರ್ಭದಲ್ಲಿ ಮೂಲ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಸೈಜ್ ಫೋಟೋ ಕಡ್ಡಾಯವಾಗಿ ತರಬೇಕು.
ಯಾವುದೇ ತೂಕದ ವಿಭಾಗದಲ್ಲಿ ನಾಲ್ಕಕ್ಕಿಂತ ಕಡಿಮೆ ಸ್ಪರ್ಧಾಳುಗಳಿದ್ದರೆ ಆ ವಿಭಾಗದ ಸ್ಪರ್ಧೆಯನ್ನು ರದ್ದುಪಡಿಸಲಾಗುವುದು. ಅಶಿಸ್ತಿನ ವರ್ತನೆ ತೋರುವ ಕುಸ್ತಿಪಟು ಅಥವಾ ಅವರ ತಂಡದ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತರಾದ ಮೂರು ಸ್ಪರ್ಧಾಳುಗಳಿಗೆ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಲಾಗುವುದು.
ಸಂಘಟಕರು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. ಉಭಯ ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ಕುಸ್ತಿಪಟುಗಳು ಭಾಗವಹಿಸಿ ಪಂದ್ಯಾಕೂಟವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ವಿಜಯ ಸುವರ್ಣ – 9731052556 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


