HomeFresh Newsಕಾಪುವಿನಲ್ಲಿ ಎನ್‌ಎಸ್‌ಎಸ್ ಶಿಬಿರ ಸಮಾರೋಪ: 10 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ

ಕಾಪುವಿನಲ್ಲಿ ಎನ್‌ಎಸ್‌ಎಸ್ ಶಿಬಿರ ಸಮಾರೋಪ: 10 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ

ಕಾಪು: ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಕಾಪುವಿನ ಮಹಾದೇವಿ ಪ್ರೌಢಶಾಲೆಯಲ್ಲಿ ಏಳು ದಿನಗಳ ಕಾಲ ನಡೆದ ವಾರ್ಷಿಕ ವಿಶೇಷ ಶಿಬಿರ ಸಂಪನ್ನಗೊಂಡಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಶಿಬಿರವನ್ನು ಉದ್ಘಾಟಿಸಿದ್ದರು. ಶಿಬಿರದಲ್ಲಿ ಭಾಗವಹಿಸಿದ 50 ವಿದ್ಯಾರ್ಥಿಗಳು, ಶಿಬಿರಾಧಿಕಾರಿ ಪರಮೇಶ್ವರ್ ಎಂ. ಮೊಗವೀರ ಅವರ ನೇತೃತ್ವದಲ್ಲಿ ಕಾಪು ಬೀಚ್ ಹಾಗೂ ಪಟ್ಟಣದ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸುಮಾರು 10 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದರು.
ಶಿಬಿರದ ಅವಧಿಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಯೋಗ, ಕಾನೂನು ಅರಿವು ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಶ್ರಮದಾನ ಹಾಗೂ ಜಾಗೃತಿ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಸಮಾರೋಪ ಭಾಷಣ ಮಾಡಿ, ಶಿಬಿರಾರ್ಥಿಗಳು ನಡೆಸಿದ ಶ್ರಮದಾನ ಹಾಗೂ ಪರಿಸರ ಸ್ವಚ್ಛತಾ ಕಾರ್ಯವನ್ನು ಶ್ಲಾಘಿಸಿದರು. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ಸಮಾಜಮುಖಿ ಚಿಂತನೆ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗರಾಜ, ಕಾಪು ಬೀಚ್ ಫ್ರೆಂಡ್ಸ್ ಅಧ್ಯಕ್ಷ ಚಂದ್ರಶೇಖರ ಬೀರ, ಮಾಧವ ಪಾಲನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಮಮತಾ ಶೆಟ್ಟಿ, ವಿದ್ವಾನ್ ಪ್ರಕಾಶ್ ಅಮ್ಮಣ್ಣಯ್ಯ, ಶಿಬಿರಾಧಿಕಾರಿ ಪರಮೇಶ್ವರ್ ಎಂ. ಮೊಗವೀರ, ಲಕ್ಷ್ಮೀಕಾಂತ್ ಕಾಪು, ಮಧುಕರ್ ಅಂಚನ್, ಕಾಲೇಜಿನ ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಕುಮಾರಿ ಸುಮಾ ಪ್ರಾರ್ಥಿಸಿದರು. ಪರಮೇಶ್ವರ್ ಮೊಗವೀರ ಸ್ವಾಗತಿಸಿ, ಶಿಬಿರದ ವರದಿ ವಾಚಿಸಿದರು. ಆಶಾ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀಕಾಂತ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments