ಬಂಟ್ವಾಳ: ಇಲ್ಲಿನ ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ಎಂಬಲ್ಲಿದ್ದಾಗ ಪ್ರಶಾಂತ್ ಬೆಳ್ಚಾಡ ಎಂಬವರಿಗೆ ತಲವಾರು ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ ಮೂರು ಮಂದಿ ಆರೋಪಿಗಳನ್ನು ಪೊಲೀಸರು ಸೆ.25 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.


ಕಳೆದ ಸೆ 20ರಂದು ತೆಂಕಬೆಳ್ಳೂರು ಗ್ರಾಮದ ನಿವಾಸಿ ಪ್ರಶಾಂತ್ ಬೆಳ್ಚಾಡ್ ತೆಂಕ ಬೆಳ್ಳೂರು ಗ್ರಾಮದ ಕಮ್ಮಾಜೆ ಎಂಬಲ್ಲಿದ್ದಾಗ ಅಟೋರಿಕ್ಷಾದಲ್ಲಿ ಬಂದ ಅವರ ಪರಿಚಯದ ಆರೋಪಿಗಳಾದ ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ ( 43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಎಂಬವರುಗಳು ತಲವಾರು ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದು, ಹಲ್ಲೆಯ ಪರಿಣಾಮ ಪ್ರಶಾಂತ್ ಬೆಳ್ಚಾಡ ಅವರಿಗೆ ತೀವ್ರ ರಕ್ತಗಾಯಗಳಾಗಿರುತ್ತದೆ. ಪ್ರಶಾಂತ್ ಅವರ ಪರಿಚಯದವರು ಬರುತ್ತಿರುವುದನ್ನು ಕಂಡು ಆರೋಪಿಗಳು ಓಡಿಹೋಗಿದ್ದು, ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

