HomeFresh Newsಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಸಾವಿನ ಸಂಖ್ಯೆ 19ಕ್ಕೆ ಏರಿಕೆ; ಆಯೋಜಕರು ಸೇರಿ 12 ಮಂದಿ ವಶಕ್ಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ‘ಚೋರ್‌ಬಗಾನ್ ಸಾರ್ವಜನಿಕ ದುರ್ಗೋತ್ಸವ’ ಪಂಡಾಲ್‌ನಲ್ಲಿ ಶನಿವಾರ ಸಂಜೆ ನಡೆದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಈ ಘಟನೆಯಲ್ಲಿ 25ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ಸಂಜೆ ಪೂಜಾ ಪಂಡಾಲ್ ಬಳಿ ಜನಸಾಗರವೇ ನೆರೆದಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಭಾರಿ ಮಳೆ ಸುರಿಯಲಾರಂಭಿಸಿತು. ಮಳೆಯಿಂದ ಬಚಾವಾಗಲು ನೂರಾರು ಜನರು ಒಮ್ಮೆಗೇ ಪಂಡಾಲ್‌ನ ಒಳಗಡೆ ಹೋಗಲು ಕಿರಿದಾದ ಗಲ್ಲಿಯೊಂದಕ್ಕೆ ನುಗ್ಗಿದರು.

ರಸ್ತೆ ಜಾರುತ್ತಿದ್ದರಿಂದ ನಿಯಂತ್ರಣ ತಪ್ಪಿ ಜನರು ಒಬ್ಬರ ಮೇಲೊಬ್ಬರು ಬಿದ್ದರು. ಇದೇ ವೇಳೆ, ಜನದಟ್ಟಣೆಯಿಂದಾಗಿ ಪಂಡಾಲ್ ಕುಸಿಯಬಹುದು ಎಂದು ಆಯೋಜಕರು ಮೈಕ್‌ನಲ್ಲಿ ಮಾಡಿದ ತಪ್ಪು ಪ್ರಕಟಣೆ ಜನರ ಆತಂಕವನ್ನು ಮತ್ತಷ್ಟು ಹೆಚ್ಚಿಸಿತು. ಇದರಿಂದ ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ನಡುವೆ ಸ್ಥಳೀಯರು ಪೊಲೀಸರ ಲೋಪದೋಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

ಗಾಯಾಳುಗಳನ್ನು ದಾಖಲಿಸಿರುವ ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಅವರು, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಗಾಯಗೊಂಡ 25 ಮಂದಿಯಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು.

ಉತ್ತರ ಕೋಲ್ಕತ್ತಾದ ಚಿತ್ತರಂಜನ್ ಅವೆನ್ಯೂ ಸಮೀಪದ ಚೋರೆಬಾಗನ್‌ನಲ್ಲಿ ಸಮುದಾಯದ ವತಿಯಿಂದ ಈ ದುರ್ಗಾ ಪೂಜೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ವೇಳೆ ಆಯೋಜಕರು ಮಾಡಿದ ಒಂದು ಪ್ರಕಟಣೆಯಿಂದ ಜನರು ಏಕಾಏಕಿ ಮುನ್ನುಗ್ಗಿದ್ದು, ಇದರಿಂದ ಈ ದುರ್ಘಟನೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ದುರ್ಗಾ ಪೂಜಾ ಆಯೋಜಕ ಸಂಘದ ಪದಾಧಿಕಾರಿಗಳು, ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಕರ್ತವ್ಯದಲ್ಲಿದ್ದ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೃತಪಟ್ಟವರಲ್ಲಿ ಆರು ಮಂದಿಯನ್ನು ಈವರೆಗೆ ಗುರುತಿಸಲಾಗಿದ್ದು, ಅವರ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ. ಘಟನೆ ಕುರಿತು ಸತ್ಯಾಂಶ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಳೆ ಆರಂಭವಾಗುತ್ತಿದ್ದಂತೆ ಮಂಟಪದ ಹೊರಗೆ ಕಾಯುತ್ತಿದ್ದ ಜನರು ಒಳಗೆ ಹೋಗಲು ಏಕಾಏಕಿ ಮುನ್ನುಗ್ಗಿದರು. ಈ ವೇಳೆ ಕೆಲವರು ರಸ್ತೆಯ ಮೇಲೆ ಬಿದ್ದಿದ್ದು, ಕಾಲ್ತುಳಿತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments