ಮಂಗಳೂರು: ದಿನಾಂಕ 15 ಅಕ್ಟೋಬರ್ 2026ರ ಶನಿವಾರದಂದು ಓಂ ಫ್ರೆಂಡ್ಸ್ ದೈವಲಾಗುಡ್ಡೆ ಕುಂಜತ್ತಬೈಲು ಸಂಘದ ವತಿಯಿಂದ ಭಾರತ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರ ಸಿಬ್ಬಂದಿ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಂಗಳೂರು ತಾಲೂಕು ಸಂಚಾಲಕರು ಹಾಗೂ ಬಜ್ಪೆಯ ಪರಿವರ್ತನಾ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ರಾಘವೇಂದ್ರ ಅವರು, “ಹಲವಾರು ರಾಷ್ಟ್ರನಾಯಕರ ನಿರಂತರ ಹೋರಾಟ, ತ್ಯಾಗ ಹಾಗೂ ಬಲಿದಾನದ ಫಲವಾಗಿ ಇಂದು ನಮಗೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ಎಂಬ ಪದಕ್ಕೆ ಚ್ಯುತಿ ಬಾರದಂತೆ, ದೇಶದಲ್ಲಿ ಅಶಾಂತಿ ಸೃಷ್ಟಿಸದೆ ಎಲ್ಲರನ್ನೂ ಪ್ರೀತಿಸಿ, ಗೌರವಿಸಿ ಸಮಾನತೆಯ ಹಾದಿಯಲ್ಲಿ ನಡೆಯೋಣ. ಪ್ರತಿಯೊಬ್ಬರೂ ಗೌರವದಿಂದ ಬದುಕು ಸಾಗಿಸೋಣ” ಎಂದು ಕರೆ ನೀಡಿ, ನೆರೆದಿದ್ದ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಓಂ ಫ್ರೆಂಡ್ಸ್ ಸಂಘದ ದೈವಲಾಗುಡ್ಡೆ ಕುಂಜತ್ತಬೈಲಿನ ಸಂದೀಪ್ ಅವರು ಸಭೆಯನ್ನುದ್ದೇಶಿಸಿ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಈ ಶುಭ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ರಮಾನಾಥ್ ಭಂಡಾರಿ ಕುಂಜತ್ತಬೈಲು, ಅತಿಥಿಗಳಾದ ನಿಶಾಲ್ ಕುಂಜತ್ತಬೈಲು ಹಾಗೂ ಹಿರಿಯ ನಾಗರಿಕರಾದ ರತ್ನಾಕರ ಶೆಟ್ಟಿ ಮತ್ತು ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೀಕ್ಷಾ ಶೆಟ್ಟಿ ಪಡ್ಪು ಕುಂಜತ್ತಬೈಲು ನಿರೂಪಿಸಿದರೆ, ಪ್ರದೀಪ್ ದೈವಲಾಗುಡ್ಡೆ ವಂದಿಸಿದರು.

