ಅಂಬುಲೆನ್ಸ್ ಇಲ್ಲದೆ ಸೊರಗುತ್ತಿದೆ ಮೂರೂ ಟೋಲ್ ಪ್ಲಾಜಾಗಳು
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಜನರಿಂದ ಸುಂಕ ಪಡೆಯುವ ಟೋಲ್ ಪ್ಲಾಜಾಗಳಲ್ಲಿ ಅಗತ್ಯವಾಗಿ ಇರಲೇ ಬೇಕಾದ ಅಂಬುಲೆನ್ಸ್ ಗಳು ಗ್ಯಾರೇಜ್ ನಲ್ಲಿ ಚಿರ ವಿಶ್ರಾಂತಿಯಲ್ಲಿದ್ದು, ಕಾನೂನು ಮೀರಿ ವ್ಯವಹಾರಿಸುತ್ತಿರುವ ಇವರನ್ನು ಕೇಳುವವರೇ ಇಲ್ಲವಾಗಿದೆ.
ಮಂಗಳೂರು ಜಿಲ್ಲೆಯ ತಲಪಾಡಿ, ಉಡುಪಿ ಜಿಲ್ಲೆಯ ಹೆಜಮಾಡಿ ಹಾಗೂ ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿ ಕಾರ್ಯಚರಿಸುತ್ತಿದ್ದ ಒಬಿರಾಯನ ಕಾಲದ ಅಂಬುಲೆ೦ನ್ಸ್ ಗಳು ಕೆಟ್ಟು ಹೋಗಿ ಗ್ಯಾರೇಜ್ ಸೇರಿ ಎರಡು ತಿಂಗಳೇ ಕಳೆದರೂ ದುರಸ್ತಿ ಭಾಗ್ಯ ಬಂದಿಲ್ಲ, ಕಾನೂನು ಕಟ್ಟಲೆ ಎಂಬುದಾಗಿ ಕ್ರಮಬದ್ಧವಾಗಿ ಟೋಲ್ ಪಡೆಯುತ್ತಿರುವ ನವಯುಗ್ ಮಾಲಕತ್ವದ ಟೋಲ್ ಪ್ಲಾಜಾಗಳು ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾಗುತ್ತಿದೆ. ಹೆದ್ದಾರಿಯಲ್ಲಿ ಅಪಘಾತಗಳು ನಡೆದಾಗ ಟೋಲ್ ಪ್ಲಾಜಾಗಳಲ್ಲಿ ಅಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಖಾಸಗಿ ಅಂಬುಲೆನ್ಸ್ ಗಳಿಗೆ ಕಾದು ಅದೆಷ್ಟೋ ಪ್ರಾಣಹಾನಿಯಾಗಿರುವುದನ್ನು ಇಲ್ಲಿ ಗಮನಿಸ ಬಹುದಾಗಿದೆ. ಅದಲ್ಲದೆ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಕಾರ್ಯಚರಿಸುತ್ತಿರುವ ರೂಟ್ ಪಟ್ರೊಲ್ ವಾಹನ ತನ್ನ ಮೂಲ ಕರ್ತವ್ಯ ಮರೆತು ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ಸೇವೆಗೆ ಅತೀ ಹೆಚ್ಚು ಬಳಕೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಅದಕ್ಕಿಂತಲೂ ಪ್ರಮುಖವಾಗಿ ಈ ವಾಹನ ಹೆದ್ದಾರಿ ಗಸ್ತಿನಲ್ಲಿರ ಬೇಕಾಗಿದ್ದರೂ ರಾತ್ರಿ ಹೊತ್ತು ಪಡುಬಿದ್ರಿ ಠಾಣಾ ಪೊಲೀಸ್ ಗಸ್ತಿಗೆ ಪಿಕ್ಸ್ ಆಗುವ ಮೂಲಕ, ಟೋಲ್ ಪ್ಲಾಜಾದ ಹೆದ್ದಾರಿ ಗಸ್ತು ಮರಿಚಿಕೆಯಾಗಿದೆ. ಈ ಎಲ್ಲಾ ಅವ್ಯವಸ್ಥೆಗಳನ್ನು ಪ್ರಶ್ನಿಸ ಬೇಕಾಗಿದ್ದ ಇಲಾಖೆಗಳು ಕರ್ತವ್ಯ ಮರೆತಂತ್ತಿದ್ದು, ಈ ಟೋಲ್ ಪ್ಲಾಜಾಗಳನ್ನು ಕಾಲಕಾಲಕ್ಕೆ ಎಚ್ಚರಿಸಲೆಂದೇ ಹುಟ್ಟಿಕೊಂಡ ಹೋರಾಟ ಸಮಿತಿಗಳು ಏಕೆ ಮೌನವಾಗಿದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.