ಕಾಡಬೆಟ್ಟು-ಪಿಲಿಂಗಾಲು ಸಂಪರ್ಕ ರಸ್ತೆ ಕೆಸರುಮಯ ಸಂಚಾರಕ್ಕೆ ತೊಡಕು
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು-ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ ಸಂಪರ್ಕಿಸುವ ಮಣ್ಣಿನ ರಸ್ತೆ ಪ್ರಥಮ ಮಳೆಗೆ ಸಂಪೂರ್ಣ ಹದಗೆಟ್ಟು ಕೆಸರುಗದ್ದೆಯಾಗಿ ಪರಿವರ್ತನೆಯಾಗಿದೆ.ಈಗಾಗಲೇ ಕಿರಿದಾಗಿರುವ ಈ ರಸ್ತೆಯು ಬೇಸಿಗೆಯಲ್ಲಿ ಧೂಳು ತುಂಬಿಕೊಂಡರೆ ಮಳೆಗಾಲದಲ್ಲಿ ಕೆಸರುಮಯಗೊಂಡು ಪಾದಚಾರಿಗಳಿಗೆ ನಡೆದಾಡಲು ಕೂಡ ಅಸಾಧ್ಯವಾಗಿದೆ. ಇದೇ ಪರಿಸರದಲ್ಲಿ ಕಾರಣಿಕ ಪ್ರಸಿದ್ಧ ಗಾಯತ್ರಿ ದೇವಿ ದೇವಸ್ಥಾನವೂ ಇದೆ.
ವಗ್ಗ ರಾಷ್ಟ್ರೀಯ ಹೆದ್ದಾರಿ ಬಳಿ ಕಾವಳಕಟ್ಟೆ ವಾಮದ ಪದವು ನಡುವಿನ ಪಿಲಿಂಗಾಲು ದೇವಸ್ಥಾನ ರಸ್ತೆ ಇದೆ, ಮುಂದಿನ ವರ್ಷ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಈ ದೇವಸ್ಥಾನಕ್ಕೆ ಬರಲು ಅನುಕೂಲವಾಗುವಂತೆ ಕಾಂಕ್ರೀಟ್ ರಸ್ತೆ ಒದಗಿಸಬೇಕು ಎಂದು ಇಲ್ಲಿನ ಪರಿಸರ ನಿವಾಸಿಗಳು ಆಗ್ರಹಿಸಿದ್ದಾರೆ. ಈ ಗ್ರಾಮ ಪಂಚಾಯತ್ ಅಧ್ಯಕ್ಷರ ಸಹಿತ ಶಾಸಕರು, ಸಂಸದರಿಗೆ ಮನವಿ ಸಲ್ಲಿಸಿದ್ದರೂ ಏನೂ ಪ್ರಯೋಜವಿಲ್ಲದಂತಾಗಿದೆ. ಕೂಡಲೇ ಕಾಂಕ್ರೀಟ್ ರಸ್ತೆಯನ್ನು ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.