ಕೋಮುವಾದ, ಬಂಡವಾಳವಾದ ಆಳುವ ವರ್ಗದ ಪ್ರಬಲ ಆಯುಧ : ಮುನೀರ್ ಕಾಟಿಪಳ್ಳ
ಉದಾರೀಕರಣ,ಖಾಸಗೀಕರಣ ದೇಶದ ದುಡಿಯುವ ಜನವಿಭಾಗ,ಸಣ್ಣ ವ್ಯಾಪಾರಸ್ಥರು ಸೇರಿದಂತೆ ಬಹುತೇಕರ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರ ವ್ಯಾಪಾರಕ್ಕೆ ಪೂರ್ತಿಯಾಗಿ ತೆರೆದುಕೊಂಡಿದ್ದು ಸಾಮಾನ್ಯ ಜನರಿಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಚಪ್ಪಲಿ, ದಿನಸಿ, ತರಕಾರಿ, ಮೀನು ಮಾಂಸದಂತಹ ಚಿಲ್ಲರೆ ವ್ಯಾಪಾರದಲ್ಲೂ ಕಂಪೆನಿಗಳು ಏಕಸ್ವಾಮ್ಯ ಸಾಧಿಸುತ್ತಿದ್ದು ಸಣ್ಣ ಪುಟ್ಟ ಪೇಟೆ ಪಟ್ಟಣಗಳಲ್ಲೂ ತಮ್ಮ ಬೃಹತ್ ಅಂಗಡಿ ಮಳಿಗೆಗಳನ್ನು ತೆರೆಯುತ್ತಿದ್ದಾರೆ. ಈವರಗೆ ಇಂತಹ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿದ್ದ ಸಣ್ಣ ವ್ಯಾಪಾರಿಗಳು ಸ್ಪರ್ಧೆ ಎದುರಿಸಲಾಗದೆ ದಿವಾಳಿಯಾಗುತ್ತಿದ್ದಾರೆ. ಇದರಿಂದ ದೇಶದ ಒಟ್ಟು ಶೇಕಡಾ ಎಂಬತ್ತರಷ್ಟು ಜನ ಭಾದಿತರಾಗಿದ್ದಾರೆ. ಅತೃಪ್ತಿ, ಅಸಹಾಯಕತೆ ಮಡುಗಟ್ಟುತ್ತಿದೆ. ಈ ಅತೃಪ್ತಿ ಆಳುವ ವರ್ಗದ ವಿರುದ್ದದ ಆಕ್ರೋಶವಾಗಿ ಪರಿವರ್ತನೆಗೊಳ್ಳುವುದನ್ನು ತಡೆಯಲು ಕೋಮುವಾದವನ್ನು ಬ್ರಹ್ಮಾಸ್ಥ್ರವಾಗಿ ಬಳಸಲಾಗುತ್ತಿದೆ. ಈ ಹುನ್ನಾರದ ಫಲವಾಗಿಯೇ ಇಂದು ಎಲ್ಲೆಡೆ ಮತೀಯ ಪ್ರಕ್ಷುಬ್ದತೆ ಆವರಿಸುತ್ತಿದೆ. ತಮ್ಮ ಬದುಕಿನ ಹಕ್ಕುಗಳಿಗಾಗಿ ಒಂದಾಗಿ ಹೋರಾಟ ಕಟ್ಟಬೇಕಾಗಿದ್ದ ಜನತೆ ಧರ್ಮದ ಆಧಾರದಲ್ಲಿ ವಿಭಜನೆಗೊಂಡು ಪರಸ್ಪರ ಕಾದಾಡುತ್ತಿದ್ದಾರೆ. ಧರ್ಮ ರಕ್ಷಣೆಯ ಮುಖವಾಡ ತೊಟ್ಟ ಸಂಘಟನೆಗಳು ಆಳುವ ವರ್ಗದ ನಿರ್ದೇಶನದಂತೆ ಜನತೆಯ ಮಧ್ಯೆ ವಿಷ ಬೀಜಗಳನ್ನು ಬಿತ್ತಲು ಉದ್ಯೋಗ ನೀಡಬೇಕಾದ ನಿರುದ್ಯೋಗಿ ಯುವಕರ ಕೈಗೆ ತ್ರಿಶೂಲ, ತಲವಾರು ಕೊಟ್ಟು ಪೂರ್ವ ನಿರ್ಧರಿತ ಅಜೆಂಡಾಗಳನ್ನು ಜಾರಿಗೊಳಿಸಲು ಕೆಲಸ ಮಾಡುತ್ತಿವೆ. ಜನತೆ ಈ ಕುರಿತು ಎಚ್ಚರಗೊಳ್ಳಬೇಕು. ಬಂಡವಾಳವಾದ, ಕೋಮುವಾದ ಆಳುವ ವರ್ಗದ ಕೈಯಲ್ಲಿರುವ ಪ್ರಬಲ ಆಯುಧ ಎಂಬುದನ್ನು ಅರ್ಥ ಮಾಡಿಕೊಂಡು ಈ ಅವಳಿ ನೀತಿಗಳನ್ನು ಸೋಲಿಸಲು ಒಂದಾಗಬೇಕು ಎಂದು ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.
ಅವರು CPIM ಮಂಗಳೂರು ನಗರ ಉತ್ತರ ಸಮ್ಮೇಳನದ ಅಂಗವಾಗಿ ಪಂಜಿಮೊಗರು ವಿದ್ಯಾನಗರ ಜಂಕ್ಷನ್ ನಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿ ಭಾಗವಹಿಸುತ್ತಾ ಈ ಮಾತುಗಳನ್ನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಕಾರ್ಪೋರೇಟರ್,CPIM ದ.ಕ.ಜಿಲ್ಲಾ ಸಮಿತಿ ಸದಸ್ಯರಾದ ದಯಾನಂದ ಶೆಟ್ಟಿಯವರು ಮಾತನಾಡುತ್ತಾ,ಮತಾಂತರ, ಗೋಹತ್ಯೆ,ಲವ್ ಜಿಹಾದ್ ಮುಂತಾದ ಮತೀಯ ವಿಚಾರಗಳನ್ನು ಬಡಿದೆಬ್ಬಿಸಿ, ಜನರ ಭಾವನೆಗಳನ್ನು ಕೆರಳಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ ಸಂಘಪರಿವಾರ ತುಳುನಾಡಿನ ಸಂಸ್ಕ್ರತಿ ಹಾಗೂ ಸೌಹಾರ್ದ ಪರಂಪರೆಯನ್ನು ಹಾಳುಗೆಡಹುತ್ತಿದೆ. ಅಲ್ಪಸಂಖ್ಯಾತರ ಮೇಲೆ ವಿನಾಃ ಕಾರಣ ಧಾಳಿ ನಡೆಸುವ ಮೂಲಕ ಭಯದ ವಾತಾವರಣವನ್ನು ಸ್ರಷ್ಠಿಸುತ್ತಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ CPIM ಹಿರಿಯ ನಾಯಕರಾದ ಬಾಬು ದೇವಾಡಿಗರವರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿ,ನರೇಂದ್ರ ಮೋದಿ ಸರಕಾರ ದೇಶಕ್ಕೆ ಅಂಟಿದ ಮಹಾಶಾಪ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ CPIM ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್,DYFI ಜಿಲ್ಲಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್,CPIM ಮಂಗಳೂರು ನಗರ ಉತ್ತರ ಸಮಿತಿಯ ನೂತನ ಕಾರ್ಯದರ್ಶಿ ಅಹಮ್ಮದ್ ಬಶೀರ್,ಪಂಜಿಮೊಗರು CPIM ಶಾಖಾ ಕಾರ್ಯದರ್ಶಿ ಅನಿಲ್ ಡಿಸೋಜ ರವರು ಹಾಜರಿದ್ದರು.ಪ್ರಾರಂಭದಲ್ಲಿ ಸಂತೋಷ್ ಡಿಸೋಜ ರವರು ಸ್ವಾಗತಿಸಿದರೆ, ಕೊನೆಯಲ್ಲಿ ಚರಣ್ ಶೆಟ್ಟಿ ಯವರು ವಂದಿಸಿದರು.CPIM ನಾಯಕರಾದ ಮಹಮ್ಮದ್ ಕಲೀಲ್ ರವರು ಕಾರ್ಯಕ್ರಮ ನಿರೂಪಿಸಿದರು.