ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರ ಬಂಧನ
ಬೆಂಗಳೂರಿನಿಂದ ನಿಷೇಧಿತ ಮಾದಕ ‘ಎಂಡಿಎಂಎ’ ವಸ್ತುವನ್ನು ಖರೀದಿಸಿ ಕೇರಳದ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದ ಜಾಲವನ್ನು ಕೊಣಾಜೆ ಪೊಲೀಸರು ಮಂಜನಾಡಿ ಗ್ರಾಮದ ನಾಟೆಕಲ್ ಸಮೀಪದಲ್ಲಿ ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕಾಸರಗೋಡಿನ ನಿವಾಸಿಗಳಾದ ಶಫೀಕ್ ಮತ್ತು ಅಲ್ತಾಫ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕಮ್ಮನಹಳ್ಳಿ ಎಂಬಲ್ಲಿಂದ 65 ಗ್ರಾಂ ತೂಕದ 3.90 ಲಕ್ಷ ರೂ. ಮೌಲ್ಯದ ನಿಷೇಧಿತ ಮಾದಕ ವಸ್ತುವಾದ ‘ಎಂಡಿಎಂಎ’ನ್ನು ಖರೀದಿಸಿ ಸ್ವಿಫ್ಟ್ ಕಾರಿನಲ್ಲಿ ಕಾಸರಗೋಡಿಗೆ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಪ್ಪನಂಗಡಿ, ಮೆಲ್ಕಾರ್, ಮುಡಿಪು ಮಾರ್ಗವಾಗಿ ಸಾಗಾಟ ಮಾಡುವ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಪೊಲೀಸರು ನಾಟೆಕಲ್ ಸಮೀಪದ ವಿಜಯನಗರದಲ್ಲಿ ಕಾರನ್ನು ತಡೆದು ನಿಲ್ಲಿಸಿ ನಿಷೇಧಿತ ಮಾದಕ ವಸ್ತುವನ್ನು ವಶಕ್ಕೆ ಪಡೆದರು.
ಆರೋಪಿಗಳನ್ನು ಬಂಧಿಸಿದ ಪೊಲೀಸರು ಸಾಗಾಟಕ್ಕೆ ಬಳಸಿದ 5 ಲಕ್ಷ ರೂ. ಮೌಲ್ಯದ ಕಾರು, 11ಸಾವಿರ ರೂ. ಮೌಲ್ಯದ ೪ ಮೊಬೈಲ್ ಸಹಿತ ಒಟ್ಟು 9.01 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.