ಬಂಟ್ವಾಳದಲ್ಲಿ ಪೈಪ್ ಲೈನ್ ಕಾಮಗಾರಿ ಅಪೂರ್ಣ: ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಹೊಂಡ
ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಬಂಟ್ವಾಳ ಬೈಪಾಸ್ ಜಂಕ್ಷನ್ ಬಳಿಯಿಂದ ಜಕ್ರಿಬೆಟ್ಟುವರೆಗೆ ಎಂಆರ್‌ಪಿಎಲ್ ಸಂಸ್ಥೆಗೆ ನೀರು ಸರಬರಾಜಾಗುವ ಪೈಪ್‌ಲೈನ್ ಸ್ಥಳಾಂತರ ಕಾಮಗಾರಿ ನಡೆದಿದ್ದು, ಅಪೂರ್ಣ ಪೈಪ್‌ಲೈನ್ ಕಾಮಗಾರಿಯಿಂದಾಗಿ ಅಲ್ಲಲಿ ದೊಡ್ಡ ಹೊಂಡಗಳನ್ನು ತೋಡಿ ಮುಚ್ಚದೆ ಬಿಟ್ಟು ಅಪಾಯಕ್ಕೆ ಆಹ್ವಾನ ನೀಡಲಾಗಿದೆ. ಕಾಂಕ್ರೀಟ್ ರಸ್ತೆಗಳನ್ನು ತುಂಡರಿಸಿ ಪೈಪ್‌ಲೈನ್ ಹಾಕಿದ ಬಳಿಕ ರಸ್ತೆ ಪುನರ್ ನಿರ್ಮಿಸಿಕೊಡದೆ ಅರ್ಧದಲ್ಲೇ ಬಿಡಲಾಗಿದೆ. ಇದರಿಂದಾಗಿ ಇಲ್ಲಿನ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಹೊಸ್ಮಾರ್ ಎಂಬಲ್ಲಿ ಪೈಪ್ ಅಳವಡಿಕೆಗಾಗಿ ದೊಡ್ಡ ಹೊಂಡ ತೋಡಲಾಗಿದೆ. ಹೆದ್ದಾರಿಯ ಪಕ್ಕದಲ್ಲೇ ಈ ಹೊಂಡ ಇದ್ದು ಅಪಾಯಕಾರಿಯಾಗಿದೆ. ಇದರ ಪಕ್ಕದಲ್ಲೇ ಹೊಸ್ಮಾರ್ ಪರಿಸರದ ಮನೆಗಳಿಗೆ ಸಂಪರ್ಕ ರಸ್ತೆ ಇದ್ದು ಆಕಸ್ಮಾತ್ ಆಯ ತಪ್ಪಿ ಬಿದ್ದರೆ ದೇವರೇ ಗತಿ ಎನ್ನುವಂತಿದೆ. ಇತ್ತೀಚೆಗೆ ನಾಯಿಯೊಂದು ಹೊಂಡದಲ್ಲಿ ಸತ್ತು ಬಿದ್ದು ತೆಗೆಯಲು ಸಾಧ್ಯವಾಗದೇ ದುರ್ವಾಸನೆ ಬೀರುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೊಂಡ ತೋಡಿ ಮೂರು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಳಿಸದೇ ಇರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಕದಲ್ಲಿರುವ ಮನೆಗಳ ಮುಂಭಾಗ ಮೇಲ್ಬಾಗದಿಂದಲೇ ಪೈಪ್ ಅಳವಡಿಸಲಾಗಿದ್ದು ಮನೆ ಸಂಪರ್ಕಕ್ಕಿದ್ದ ರಸ್ತೆಯೂ ಇಲ್ಲದಂತಾಗಿದೆ. ರಾ. ಹೆದ್ದಾರಿ ಪಕ್ಕವೇ ಮನೆ ಇದ್ದರೂ ಕೂಡ ತಮ್ಮ ಮನೆಯಂಗಳಕ್ಕೆ ವಾಹನಗಳನ್ನು ಕೊಂಡು ಹೋಗಲಾಗದ ಸ್ಥಿತಿ ಇಲ್ಲಿನವರದ್ದು. ಕಾಮಗಾರಿ ಬಳಿಕ ಮನೆ ಸಂಪರ್ಕಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿ, ಹೇಳಿದವರು ಮತ್ತೆ ಇತ್ತ ಸುಳಿದಿಲ್ಲ, ಅಪೂರ್ಣ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಚರಂಡಿ ಇಲ್ಲದೆ ಮಳೆನೀರೆಲ್ಲಾ ಮನೆ ಮುಂದೆ ಸಂಗ್ರಹಗೊಂಡು ಸೊಳ್ಳೆ ಉತ್ಪಾದನೆಗೆ ಅವಕಾಶ ಮಾಡಿಕೊಟ್ಟಂತಿದೆ. ಈ ಸಮಸ್ಯೆಗಳನ್ನು ಸ್ಥಳೀಯ ನಿವಾಸಿ ಜಗದೀಶ್ ಎಂಬವರು ಈ ಮೇಲ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದರೂ ಸ್ಪಂದನೆ ಸಿಕ್ಕಿಲ್ಲ.
ಮುಗ್ದಲ್‌ಗುಡ್ಡೆ ಎಂಬಲ್ಲಿನ ಮನೆಗಳಿಗೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯನ್ನು ತುಂಡರಿಸಿ ಪೈಪ್ ಅಳವಡಿಸಲಾಗಿದೆ. ಆದರೆ ಆ ಬಳಿಕ ಹೊಂಡವನ್ನೂ ಮುಚ್ಚದೇ, ರಸ್ತೆಯನ್ನು ಪುನರ್ ನಿರ್ಮಿಸಿ ಕೊಡದೆ ಹಾಗೆಯೇ ಬಿಡಲಾಗಿದೆ. ಮೂರು ತಿಂಗಳಿನಿಂದ ಇದೇ ಸ್ಥಿತಿ ಇದ್ದು ಈ ಭಾಗದ ಜನರು ಈ ರಸ್ತೆಯ ಮೂಲಕ ಮನೆಗೆ ಹೋಗಲು ಆತಂಕ ಪಡುವಂತಾಗಿದೆ.
ಪೈಪ್‌ಲೈನ್‌ಗಾಗಿ ಹೊಂಡ ನಿರ್ಮಿಸುವ ವೇಳೆ ಸ್ಪೋಟಕ ಬಳಸಿ ಬಂಡೆ ಹೊಡೆದ ಪರಿಣಾಮ ಸ್ಥಳಿಯ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಡಿದೆ ಎನ್ನುವ ದೂರುಗಳು ಕೇಳಿ ಬಂದಿದೆ. ಲೆಕ್ಕೆಸರಿಪಾದೆ ಎಂಬಲ್ಲಿ ಶ್ರೀಹರಿ ಎಂಬವರ ಆರ್‌ಸಿಸಿ ಮನೆ ಹಾಗೂ ಸುಧಾಕರ ಎಂಬರ ಹೆಂಚಿನ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿರುಕು ಸರಿ ಪಡಿಸಿ ಕೊಡುವುದಾಗಿ ಕಂಪೆನಿ ಭರವಸೆ ನೀಡಿ ಮರೆತು ಬಿಟ್ಟಿದೆ. ದುರಸ್ತಿಗಾಗಿ ತಂದಿಟ್ಟಿದ್ದ ಸಿಮೆಂಟ್ ಕಲ್ಲಾಗಿದೆ ಎಂದು ಮನೆಮಂದಿ ತಿಳಿಸಿದ್ದಾರೆ.