ಬಿಜೆಪಿಯ ಕಪಟ ಹಿಂದೂತ್ವಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ : ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪುರ: ದೇವಸ್ಥಾನದ ರಕ್ಷಣೆಯ ಹೆಸರಲ್ಲಿ ನಾಟಕವಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದೀಗ ಹಿಂದೂ ದೇವಾಲಯಗಳನ್ನು ಉರುಳಿಸಲು ಮುಂದಾಗಿದೆ. ಬಿಜೆಪಿ ನಾಯಕರ ಇಂತಹ ಕಪಟ ಹಿಂದೂತ್ವಕ್ಕೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ವಾಗ್ದಾಳಿ ನಡೆಸಿದರು.

ಅವರು ಮೈಸೂರು ನಂಜನಗೂಡಿನ ಪುರಾತನ ಹಿಂದೂ ದೇವಾಲಯ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನು ದ್ವಂಸ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ದ ಬೈಂದೂರು ಯೂತ್ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಬೃಹತ್ ಪಂಜಿನ ಮೆರವಣಿಗೆಯ ಬಹಿರಂಗಸಭೆಯಲ್ಲಿ ಮಾತನಾಡಿದರು. ಎರಡು ಸಾವಿರ ಕೋಟಿಗೂ ಅಧಿಕ ಯೋಜನೆಗಳನ್ನು ತಂದು ಬೈಂದೂರನ್ನು ಮಾದರಿ ಕ್ಷೇತ್ರವನ್ನಾಗಿಸಿದರೂ ಮನೆಮನೆಗೆ ತೆರಳಿ ಹಿಂದೂತ್ವದ ಹೆಸರಲ್ಲಿ ನನ್ನ ವಿರುದ್ದ ಅಪಪ್ರಚಾರ ನಡೆಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ ಇಂದು ಬಿಜೆಪಿಯ ಸುಳ್ಳು ಪ್ರಚಾರಕ್ಕೆ ಜನರು ಎಚ್ಚೆತ್ತುಕೊಂಡಿದ್ದಾರೆ. ದೇವಸ್ಥಾನದ ನಿರ್ಮಾಣಗಳ ವಿಚಾರದಲ್ಲಿ ಕಾಂಗ್ರೆಸ್‍ನ ಕೊಡುಗೆ ಅಪಾರವಾದುದು. ಹಿಂದೂ ದೇವಾಲಯಗಳನ್ನು ಉರುಳಿಸಿದ ಕೀರ್ತಿ ಅದು ಬಿಜೆಪಿಗೆ ಸಲ್ಲುತ್ತದೆ. ಹಿಂದೂತ್ವದ ಹೆಸರಲ್ಲಿ ಮಾಡುತ್ತಿರುವ ಕಪಟ ನಾಟಕವನ್ನು ನಿಲ್ಲಿಸಿ ಪ್ರಾಮಾಣಿಕವಾಗಿ ಹಿಂದೂ ದೇವಾಲಯಗಳ ರಕ್ಷಣೆ ಮಾಡುವಂತಹ ಕೆಲಸಕ್ಕೆ ಮುಂದಾಗಿ ಎಂದು ಗೋಪಾಲ ಪೂಜಾರಿ ಆಗ್ರಹಿಸಿದರು.

ಯೂತ್ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾದ ದೀಪಕ್ ಕೋಟ್ಯಾನ್, ಬೈಂದೂರು ಯೂತ್ ಕಾಂಗ್ರೆಸ್‍ನ ಶೇಖರ ಪೂಜಾರಿ, ಮುಖಂಡರಾದ ರಾಜು ಪೂಜಾರಿ, ಮದನ್ ಕುಮಾರ್, ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಶರತ್ ಕುಮಾರ್ ಶೆಟ್ಟಿ, ರಮೇಶ್ ಗಾಣಿಗ, ಗೌರಿ ದೇವಾಡಿಗ, ಜಗದೀಶ್ ದೇವಾಡಿಗ, ಪ್ರಶಾಂತ ಪೂಜಾರಿ ಕರ್ಕಿ ಮೊದಲಾದವರು ಇದ್ದರು.

Related Posts

Leave a Reply

Your email address will not be published.