ಬೈಕಂಪಾಡಿಯಲ್ಲಿ ನಾಗದೇವರ ವಿಗ್ರಹ ಧ್ವಂಸ: ನಂದಿ ವಿಗ್ರಹಕ್ಕೆ ಹಾನಿ
ಬೈಕಂಪಾಡಿಯ ಪ್ರದೇಶದಲ್ಲಿರುವ ಕರ್ಕೇರ ಮೂಲಸ್ಥಾನದಲ್ಲಿ ನಾಗನ ಕಟ್ಟೆಗೆ ಹಾನಿ ಮಾಡಿದ್ದಲ್ಲದೆ, ಕಾಣಿಕೆ ಹುಂಡಿ, ಮೂಲಸ್ಥಾನದ ಕಚೇರಿಯಲ್ಲಿದ್ದ ಕಪಾಟು ಹಾಗೂ ನಂದಿ ವಿಗ್ರಹವನ್ನೂ ಪುಡಿಗೈದ ಕಿಡಿಗೇಡಿಗಳು, ಇನ್ನು ಅಲ್ಲೆ ಇದ್ದ ಶಿವಲಿಂಗ ಮೂರ್ತಿಯೊಂದು ನಾಪತ್ತೆಯಾದ ಘಟನೆ ನಡೆದಿದೆ.
ಇಂದು ಬೆಳಗ್ಗೆ ಕರ್ಕೇರ ಮೂಲಸ್ಥಾನದ ಗುರಿಕಾರರು ಸಂಕ್ರಮಣ ಪೂಜೆಗೆಂದು ನಾಗದೇವರ ಕಟ್ಟೆ ಬಳಿ ತೆರಳಿದಾಗ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕರ್ಕೇರ ಮೂಲಸ್ಥಾನದ ಕಿರಣ್ ಕುಮಾರ್ ಹಾನಿಯಾದ ಬಗ್ಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಮೊಯ್ದಿನ್ ಬಾವಾ, ಸ್ಥಳೀಯ ಕಾರ್ಪೋರೇಟರ್ ಸುಮಿತ್ರ ಕರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಇಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ನಡೆದಿರುವುದು ದೌರ್ಭಾಗ್ಯ ಎಂದು ಹೇಳಿದರು.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ಮುಂದುವರೆಸಿದ್ದಾರೆ.