ಮಹಿಳಾ ಸುರಕ್ಷತಾ ಜಾಗೃತಿ ಅಭಿಯಾನ: ಮಹಿಳೆಯರ ಸುರಕ್ಷತೆ ದೇಶದ ಹೊಣೆ

ನಮ್ಮ ದೇಶದ ಸಂಸ್ಕೃತಿಯಲ್ಲಿ ಮಹಿಳೆಯರನ್ನು ಹೆಚ್ಚಾಗಿ ಗೌರವಿಸಲಾಗುತ್ತದೆ. ಇಂದು ಮಹಿಳೆಯರು ಹಲವಾರು ರಂಗಗಳಲ್ಲಿ, ವಿವಿಧ ವ್ಯವಹಾರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತಮ್ಮನ್ನು ರಾಜಕೀಯ ರಂಗದಲ್ಲಿಯೂ ಪ್ರತಿನಿಧಿಸುತ್ತಿದ್ದಾರೆ. ಹಾಗಿದ್ದರೂ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ದಿನೇ ದಿನೇ ಹೆಚ್ಚುತ್ತಿರುವ ಆತಂಕಕಾರಿ ಘಟನೆಗಳು, ಅವರ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ದೌರ್ಜನ್ಯಗಳು ನಮ್ಮ ಸಭ್ಯ ಸಮಾಜವನ್ನು ಕಂಗೆಡಿಸಿದೆ.
ನಮ್ಮ ಸಾಮಾಜಿಕ ಬದುಕಿನಲ್ಲಿ ಮಹಿಳೆಯರ ಅರಕ್ಷತೆಯ ಬಗ್ಗೆ ನಾವೇಕೆ ಹೀಗೆ ನಿಂತು ನಿಸ್ಸಹಾಯಕರಾಗಿ ಸುಮ್ಮನೆ ನೋಡುವಂತಾಗಿದೆ.
ಸ್ವತಃ ಮಹಿಳೆಯರೇ ಯಾವುದೇ ರೀತಿಯಲ್ಲಿಯೂ ಪ್ರತಿರೋಧವನ್ನು ಮಾಡಲಾರಲಾಗದಂತಹ ದುಸ್ಥಿತಿ ಸಂಜಾತವಾಗಿದೆ. ಅದೇ ಸಂದರ್ಭದಲ್ಲಿ ದೌರ್ಜನ್ಯವನ್ನು ಎಸಗಿದವರು ರಾಜಾರೋಷವಾಗಿ ಅಧಿಕಾರ ಚಲಾಯಿಸುವ, ಕಾನೂನನ್ನು ಕೈಗೆತ್ತಿಕೊಳ್ಳುವಂತಹ ವಿದ್ಯಮಾನಗಳು ಕಂಡು ಬರುತ್ತಿರುವುದರಿಂದ ಇನ್ನಷ್ಟು ಗೊಂದಲವನ್ನುಂಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಾದರೆ ಮಹಿಳೆಯರ ಸುರಕ್ಷತೆಯ ಬಗ್ಗೆ ನಾವು ಯಾವ ರೀತಿಯ ಕ್ರಮವಹಿಸಬೇಕು, ನಮ್ಮ ಮೌನ ಧೋರಣೆ ಮತ್ತು ನಮ್ಮ ಪ್ರಜಾಪ್ರಭುತ್ವವಾದಿ ಪ್ರತಿಭಟನೆಯಲ್ಲಿ ವಿರೋಧಿಗಳಿಗೆ ಇನ್ನಷ್ಟು ಪ್ರಾಬಲ್ಯ ಮೆರೆಯಲು ಅವಕಾಶವಾಗುವಂತಹ ಸ್ಥಿತಿ ಖಂಡಿತಾ ಇರಬಾರದು. ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಇದನ್ನು ಅಸಹಾಯಕರಾಗಿ ನೋಡುತ್ತಿರುವ ನಮ್ಮ ಸಮಾಜದ ದೃಷ್ಟಿಕೋನ ಬದಲಾಗಬೇಕಾದರೆ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಮಹಿಳೆಯರ ಸುರಕ್ಷತೆಯು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಬೇಕು ಇಂದು ಮಹಿಳೆಯರ ಮೇಲಿನ ದೌರ್ಜನ್ಯ ಹಿಂಸಾಚಾರ ಚಿತ್ರಣ ಹೇಗಿದೆ ಎಂದು ಒಮ್ಮೆ ಗಮನಿಸಿದರೆ ಹೃದಯ ಕಲಕುವಂತಹ ಸಾಕಷ್ಟು ಸನ್ನಿವೇಶ ನಮ್ಮ ಮುಂದೆ ಬರುತ್ತದೆ. ನಮ್ಮ ದೇಶದ ರಾಜಧಾನಿಯಾದ ನವದೆಹಲಿಯಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ 2020ರಿಂದ 2021ರ ಆರು ತಿಂಗಳ ಅವಧಿಯಲ್ಲಿ 63% ಹೆಚ್ಚಾಗಿದೆಯೆಂದು ದೆಹಲಿ ಪೊಲೀಸ್ ಇಲಾಖೆಯ ಅಂಕಿ-ಅಂಶಗಳಿಂದ ವ್ಯಕ್ತವಾಗುತ್ತದೆ.
ಒಂದೊಮ್ಮೆ ನಿರ್ಭಯಾ ಪ್ರಕರಣದಲ್ಲಿ ದೇಶದ ಗಮನ ಸೆಳೆದಿದ್ದ ರಾಜಧಾನಿಯಲ್ಲಿಂದು ಅತ್ಯಾಚಾರದ ಪ್ರಮಾಣವು ಶೇಕಡಾ 43ರಷ್ಟು ಹೆಚ್ಚಾಗಿದೆ. ಮಹಿಳೆಯರ ಅಪಹರಣ ಪ್ರಕರಣಗಳು 1026 ರ ಸಂಖ್ಯೆಯಿಂದ 1580 ರವರೆಗೆ ತಲುಪಿದೆ.
ಮಹಿಳೆಯರ ಸುರಕ್ಷತೆಯ ಬಗ್ಗೆ ನಿರ್ಭಯಾ ಪ್ರಕರಣದ ನಂತರದಲ್ಲಿ ಹಲವಾರು ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಿದ್ದರೂ, ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಮಾಣ ಎಳ್ಳಷ್ಟೂ ಕಡಿಮೆಯಾಗಿಲ್ಲ ಬದಲಾಗಿ ಹಾಡುಹಗಲೇ ಒಂದು ಪ್ರಕರಣ ವರದಿಯಾದರೆ, ಅವರನ್ನು ಬಂಧಿಸುವಷ್ಟರಲ್ಲಿ ಇನ್ನೆರಡು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇತ್ತೀಚಿನ ದಿನಗಳಲ್ಲಿ ಸಂಭವಿಸಿದ ಮೈಸೂರಿನ ಚಾಮುಂಡಿ ಬೆಟ್ಟದ ಪ್ರಕರಣವನ್ನು ಪರಿಶೀಲಿಸಿದಾಗಲೂ ಇಷ್ಟೊಂದು ಕ್ರಿಮಿನಲ್ ವರ್ತನೆಯನ್ನು ಯಾರಿಂದ ಎಲ್ಲಿಂದ ಬಿಡಲಾಗುತ್ತದೆಯೆಂಬುವುದು ನಮಗೆ ತಿಳಿದುಬರುತ್ತಿಲ್ಲ. ಇವೆಲ್ಲವುಗಳಿಗೂ ಮದ್ಯಪಾನ ಕಾರಣವೆಂಬುದನ್ನು ನಮಗೆ ತಿಳಿಯುವುದಾದರೆ, ಮಧ್ಯಪಾನವನ್ನು ಪೋಷಿಸುವ ನಮ್ಮ ಆಡಳಿತ ವರ್ಗ ಮತ್ತು ಸಮಾಜವು ಇನ್ನು ಕೆಡುಕುಗಳಿಂದ ಹೇಗೆ ತಡೆಯುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳು ಕೊನೆಗೂ ಒಗಟುಗಳಾಗಿಯೇ ನಿಲ್ಲುತ್ತವೆ.
ಹೌದು, ಮದ್ಯಪಾನವು ಮಾನವನ ಬದುಕಿನ ಎಲ್ಲ ಸ್ತರಗಳಲ್ಲಿಯೂ ಬಹಳ ಅಪಾಯಕಾರಿ ಪರಿಣಾಮವನ್ನು ನೀಡುತ್ತದೆ. ನಮ್ಮ ಆಡಳಿತದಲ್ಲಿರುವವರಿಂದ ಹಿಡಿದು, ಪೊಲೀಸ್ ಇಲಾಖೆಯಲ್ಲಿ ಕೂಡಾ ಇಂದು ಮದ್ಯಪಾನದ ಲಭ್ಯತೆ ಅಮಾಯಕರ ನಿದ್ದೆಗೆಡಿಸಿದೆ ಮಹಿಳೆಯರ ಮೇಲಿನ ಅತ್ಯಾಚಾರ ದೌರ್ಜನ್ಯಗಳಿಗೆ ಕುಮ್ಮಕ್ಕು ನೀಡುವ ನಮ್ಮ ಪೊಲೀಸ್ ಇಲಾಖೆಯನ್ನು ನಿಷ್ಠಾವಂತ ತಂಡವಾಗಿ ಮಾರ್ಪಡಿಸಬೇಕಾಗಿದೆ. ಎಲ್ಲಿಯವರೆಗೆ ಪೊಲೀಸ್ ಠಾಣೆಗಳು ರಕ್ಷಣೆಯ ತಾಣಗಳಾಗಿ ಬದಲಾಗುವುದಿಲ್ಲವೋ, ಎಲ್ಲಿಯವರೆಗೆ ಅದು ಅಪರಾಧಿಗಳಿಗೆ ದುಸ್ವಪ್ನವಾಗಿ ಗೋಚರಿಸುವುದಿಲ್ಲವೋ ಅಲ್ಲಿಯವರೆಗೆ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು. ಮಹಿಳೆಯರ ರಕ್ಷಣೆ ದೇಶದ ಹೊಣೆ ಎಂಬುದಾಗಿ ನಾವು ಹೇಳಿಕೊಂಡ ಮಾತ್ರಕ್ಕೆ ಎಲ್ಲವೂ ಮುಗಿಯುವುದಿಲ್ಲ, ಅಷ್ಟೊಂದು ಜವಾಬ್ದಾರಿಯನ್ನು ನಿರ್ವಹಿಸಲು ನಾವು ಹೇಗೆ ಕಾರ್ಯೋನ್ಮುಖರಾಗಬೇಕು ಎಂಬುವುದನ್ನು ನಮ್ಮ ಸಮಾಜ ಶಾಸ್ತ್ರಜ್ಞರು ಬುದ್ಧಿಜೀವಿಗಳು ಪತ್ರಕರ್ತರು ಸೇರಿ ಚರ್ಚಿಸಬೇಕು, ನಮ್ಮ ಶಾಲಾಕಾಲೇಜುಗಳಲ್ಲಿ ನಮ್ಮ ಸಹೋದರಿಯರಿಂದ ಮಹಿಳೆಯರ ಸಮಸ್ಯೆಗಳ ಬಗ್ಗೆ ಚಿಂತನಮಂಥನ ನದೆಯಬೇಕು ಅವರು ನಮ್ಮ ಸರಿಸಮಾನ ಜೀವನ ಸಂಗಾತಿಗಳು ಎಂಬುವುದನ್ನು ಗಂಡು ಯುವಪೀಳಿಗೆಗೆ ವ್ಯಕ್ತವಾಗಬೇಕು. ಮಹಿಳೆಯರಿಗೆ ಸಲ್ಲಬೇಕಾದ ಗೌರವವೆಂದರೆ ಅದು ಕೇವಲ ಅಲಂಕಾರಿಕ ಮಾತುಗಳಲ್ಲ, ಆಡಂಬರದ ಹಿತನುಡಿಗಳಲ್ಲ, ಮಹಿಳೆಯರ ಗೌರವವೆಂದರೆ ಅವರನ್ನು ಸಮಾನವಾಗಿ ಗೌರವಿಸುವಂತಹ ಮನೋಭಾವನೆ ಪ್ರಾಯೋಗಿಕವಾಗಬೇಕು.
ಅವರ ವೈಯಕ್ತಿಕ ವ್ಯವಹಾರಗಳಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡದೆ ಅವರಿಗೆ ಮುಕ್ತ ಸ್ವಾತಂತ್ರ್ಯವನ್ನು ನೀಡಬೇಕು ಮಹಿಳೆಯರ ಬಗ್ಗೆ ಉತ್ತಮ ಮನೋಭಾವನೆ ರೂಪಿಸಲು ಸರ್ಕಾರವು ಕಾರ್ಯಪ್ರವೃತ್ತರಾಗಬೇಕು ಕೇವಲ ಕಾನೂನುಗಳನ್ನು ಮಾತ್ರ ರೂಪಿಸುವುದರ ಮೂಲಕ ಮಹಿಳೆಯರ ಸುರಕ್ಷತೆಯನ್ನು ಸಾಧಿಸಲು ಸಾಧ್ಯವಿಲ್ಲವೆಂಬುವುದು ಎಲ್ಲರಿಗೂ ತಿಳಿದ ವಿಚಾರ, ಹಾಗಿರುವಾಗ ಕಾನೂನಿನ ಬಗ್ಗೆ ಕಾಳಜಿ ಇರುವ ಸಮಾಜವನ್ನು ರೂಪಿಸುವಲ್ಲಿ ಸರ್ಕಾರ ಕಟಿಬದ್ಧತೆ ಹೊಂದಬೇಕು, ಜನಪ್ರತಿನಿಧಿಗಳು, ಬುದ್ಧಿಜೀವಿಗಳು ಮಹಿಳೆಯರ ಸುರಕ್ಷತೆಯ ಬಗ್ಗೆ ನಿರಂತರ ರಾಷ್ಟ್ರದ ಗಮನ ಸೆಳೆಯಬೇಕು ಹಾಗೂ ಇದಕ್ಕೆ ತಕ್ಕಂತೆ ಸಾಮಾಜಿಕ ಜನಜೀವನದಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ಹೆಚ್ಚಸಬೇಕು.
ಮಹಿಳೆಯರನ್ನು ಗೌರವಿಸುವುದು ಅವರಿಗೆ ಎಲ್ಲಾ ರಂಗಗಳಲ್ಲಿಯೂ ಅವಕಾಶ ನೀಡುವುದು ಮತ್ತು ಅಭಿವೃದ್ಧಿಯ ಪಥದಲ್ಲಿ ಅವರನ್ನು ಪಾಲುದಾರರನ್ನಾಗಿ ಮಾಡುವಂತಹ ಪ್ರಕ್ರಿಯೆಗಳಿಗೆ ಮುತುವರ್ಜಿವಹಿಸಬೇಕು.
ಇವೆಲ್ಲವುಗಳಿಗೆ ಪೂರಕವಾದ ವಾತಾವರಣ ನಮ್ಮ ಶಾಲಾ ಪಠ್ಯದಲ್ಲಿ, ಮಾಧ್ಯಮಗಳಲ್ಲಿ, ವಿವಿಧ ಜಾಹೀರಾತುಗಳಲ್ಲಿ ಮತ್ತು ಒಟ್ಟು ಸಾರ್ವಜನಿಕ ವಲಯಗಳಲ್ಲಿ ಮೂಡಿ ಬರಬೇಕು.
ಮಹಿಳೆಯರ ಸುರಕ್ಷತೆ ಕೇವಲ ಸ್ಲೋಗನ್ ಆಗಿ ಉಳಿಯದೆ ರಾಷ್ಟ್ರೀಯ ಭಾವೈಕ್ಯದ ಮೂಲಮಂತ್ರವಾಗಬೇಕು. ನಮ್ಮ ಭಾರತೀಯ ಸಮಾಜದಲ್ಲಿ ಮಹಿಳೆ ನಿರ್ಭೀತವಾಗಿ ಒಂಟಿಯಾಗಿ ಯಾವುದೇ ಸಂದರ್ಭದಲ್ಲೂ ನಡೆದು ಹೋಗಲು ಉಂಟಾಗಿರುವ ಆತಂಕ ನಿವಾರಣೆಯಾಗಬೇಕು.
ಎಲ್ಲಿ ಮಹಿಳೆಯರಿಗೆ ಸುರಕ್ಷತಾ ಸ್ವಾತಂತ್ರ್ಯವಿದೆಯೋ ಅಲ್ಲಿ ಮಹಿಳೆ ನಿರ್ಭೀತವಾಗಿರುತ್ತಾಳೆ ಮತ್ತು ಇದರಿಂದ ಸಮಾಜ ಪ್ರಗತಿಯತ್ತ ಸಾಗುವುದು ಶತಸಿದ್ಧ ಎಂಬುದು ನಮ್ಮ ವಿಶ್ವಾಸ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಅಷ್ಟೊಂದು ಭೀತಿಮುಕ್ತ,ಭರವಸೆಯ ಸಮಾಜವನ್ನು ಹೊಂದಿರುವ, ಶಾಂತಿ ಸಾಮರಸ್ಯದ ದೇಶ ನಿರ್ಮಾಣವನ್ನು ಎದುರು ನೋಡುತ್ತದೆ.

Related Posts

Leave a Reply

Your email address will not be published.