ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಗೇಟ್ ಸಿಬ್ಬಂದಿಗಳ ಮುಷ್ಕರ
ಸಿಬ್ಬಂದಿಗಳಿಗೆ ಸಂಬಳ ನೀಡದೆ ಸತ್ತಾಯಿಸುತ್ತಿದ್ದ “ಟಿಬಿಆರ್” ಕಂಪನಿಯ ವಿರುದ್ಧ ಸಮರ ಸಾರಿರುವ ಸುಮಾರು ತೊಂಭತ್ತು ಮಂದಿ ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರನಡೆಸುತ್ತಿದ್ದಾರೆ.
ಮುಂಜಾನೆ ಎಂಟು ಗಂಟೆಗೆ ಮುಷ್ಕರ ಆರಂಭಿಸಿದ ಸಿಬ್ಬಂದಿಗಳ ಮನವೊಲಿಸಲು ಅಧಿಕಾರಿಗಳು ವಿವಿಧ ಬಗೆಯಲ್ಲಿ ಪ್ರಯತ್ನ ನಡೆಸಿದರೂ ಪ್ರಯತ್ನ ವಿಫಲಗೊಂಡಿದೆ. ಈ ಬಗ್ಗೆ ಸಿಬ್ಬಂದಿಗಳ ಪರವಾಗಿ ಮಾತನಾಡಿದ ಲೀಲಾಧರ್, ತಿಂಗಳ ಹತ್ತು ತಾರೀಕಿನ ಮುಂಚಿತವಾಗಿ ಸಂಬಳ ನೀಡುವ ಭರವಸೆಯನ್ನು “ಟಿಬಿಆರ್” ಕಂಪನಿ ನೀಡಿತ್ತು, ಆದರೆ ನಾನಾ ಕಾರಣ ಹೇಳಿ ತಾರೀಕು 18 ಆದರೂ ಸಂಬಳ ನೀಡುತ್ತಿಲ್ಲ, 17ರ ಸಂಜೆಯ ಗಡುವು ನೀಡಿದ ಕಂಪನಿ ಮಾತು ತಪ್ಪಿದ ಹಿನ್ನಲೆಯಲ್ಲಿ, ಇಲ್ಲಿ ದುಡಿದು ಪಡೆಯುವ ಸಂಬಳವನ್ನೇ ನಂಬಿ ಜೀವನ ನಡೆಸುವ ನಮಗೆ ಸಂಬಳ ನೀಡದ್ದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಬ್ಯಾಂಕ್ ನ ಸಾಲ ಕಟ್ಟಲೂ ಪರದಾಟ ನಡೆಸುವಂತ್ತಾಗಿದೆ. ನಮ್ಮ ಕೆಲ ಒಂದಿಬ್ಬರು ಸಿಬ್ಬಂದಿಗಳ ಖಾತೆಗೆ ವೇತನ ವರ್ಗಾಯಿಸುವ ಮೂಲಕ ನಮ್ಮನ್ನು ವಂಚಿಸಲು ನೋಡುತ್ತಿದೆ. ಅದಲ್ಲದೆ ಸುಮಾರು ಏಳು ತಿಂಗಳಿಂದ “ಪಿ ಎಫ್ ” ಹಣ ಕೂಡಾ ಕಂಪನಿ ನೀಡದೆ ತಡೆ ಹಿಡಿದಿದೆ. ತಿಂಗಳ ಹತ್ತನೇ ತಾರೀಕಿನೊಳಗೆ ಸಂಬಳ ವರ್ಗಾಯಿಸುವ ಭರವಸೆ ನೀಡದ ಹೊರತು ಮುಷ್ಕರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.