HomeFresh Newsಯೆನೆಪೋಯ ಪದವಿ ಪೂರ್ವ ಕಾಲೇಜು ಇದರ ಸಹಯೋಗದಲ್ಲಿ ಮೈಸೂರು ವಿಭಾಗ ಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಿಗೆ ಪುನಶ್ಚೇತನ...

ಯೆನೆಪೋಯ ಪದವಿ ಪೂರ್ವ ಕಾಲೇಜು ಇದರ ಸಹಯೋಗದಲ್ಲಿ ಮೈಸೂರು ವಿಭಾಗ ಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳಿಗೆ ಪುನಶ್ಚೇತನ ಕಾರ್ಯಾಗಾರ


ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಬೆಂಗಳೂರು ಹಾಗೂ ಯೆನೆಪೋಯ ಪದವಿ ಪೂರ್ವ ಕಾಲೇಜು ಜೆಪ್ಪಿನಮೊಗರು ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ:22-09-2026 ಮತ್ತು ದಿನಾಂಕ 23-09-2026 ರಂದು ಎರಡು ದಿವಸಗಳ ಕಾಲ ವೈ ಎಂ ಕೆ ಸಭಾಂಗಣ ಯೆನೆಪೋಯ ಆರ್ಟ್ಸ್, ಕಾಮರ್ಸ್, ಸೈನ್ಸ್ ಆಂಡ್ ಮ್ಯಾನೇಜ್ಮೆಂಟ್ ಸಂಸ್ಥೆ ಕೂಳೂರು,ಮಂಗಳೂರು ಇಲ್ಲಿ ಮೈಸೂರು ವಿಭಾಗ ಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ ಪುನಶ್ಚೇತನ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಎನ್ಎಸ್ಎಸ್ ಸಂಯೋಜನಾಧಿಕಾರಿಗಳಾದ ಶ್ರೀ ಶಿವಮಾದಯ್ಯ ಇವರು ಮಾತನಾಡಿ ಯುವಶಕ್ತಿಯನ್ನು ದೇಶದ ಶಕ್ತಿಯನ್ನಾಗಿ ರೂಪಿಸಿ ಅವರಲ್ಲಿರುವ ಅಗಾಧವಾದ ಪ್ರತಿಭೆ, ಸಾಮರ್ಥ್ಯವನ್ನು ಸಮಾಜದ ಪರಿವರ್ತನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿನಯೋಗಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶ. ಕೇಂದ್ರ ಹಾಗೂ ರಾಜ್ಯ ಸರಕಾರ ಇವೆರಡರ ಸಹಕಾರದಿಂದ ಎನ್ಎಸ್ಎಸ್ ನಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಸಂಪೂರ್ಣ ಅರಿವನ್ನು ಕಾರ್ಯಕ್ರಮಾಧಿಕಾರಿಗಳಿಗೆ ನೀಡಿ ಅದರ ಪರಿಣಾಮಕಾರಿ ಅನುಷ್ಠಾನ ಕಾಲೇಜು ಹಂತದಲ್ಲಿ ಮೂಡಿ ಬಂದಾಗ ಯೋಜನೆಯು ಫಲದಾಯಕ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ನೆರೆದ ಎಲ್ಲಾ ಕಾರ್ಯಕ್ರಮಾ ಧಿಕಾರಿಗಳನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮವನ್ನು ದೀಪೋಜ್ವಲನಗೈದು ಉದ್ಘಾಟಿಸಿದ ಶ್ರೀ ಪ್ರೇಮನಾಥ ಶೆಟ್ಟಿ ಬಿ.ಎ, ಜಿಲ್ಲಾ ದೈಹಿಕ ಶಿಕ್ಷಣ ಯೋಜನಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ, ಇವರು ವಿದ್ಯಾರ್ಥಿಗಳು ಸೇವಾ ಮನೋಭಾವದ ಜೊತೆಗೆ ರಚನಾತ್ಮಕ ಚಿಂತನೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮಿದಾಗ ಮಾತ್ರ ದೇಶಕ್ಕೆ ಹೊಸ ತಾರುಣ್ಯ ಬರಲು ಸಾಧ್ಯ ಈ ದಿಸೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮುಂದೆ ಸಾಗಲಿ ಎಂದು ಶುಭ ಹಾರೈಸಿದರು. ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಯೆನೆಪೋಯ ಪದವಿ ಪೂರ್ವ ಕಾಲೇಜು ಜೆಪ್ಪಿನಮೊಗರು ಇದರ ಪ್ರಾಂಶುಪಾಲರಾದ ಶ್ರೀ ಉಜ್ವಲ್ ರೋಡ್ನಿ ಮಿನೇಜಸ್ ರವರು, ಸೇವೆಯ ಮೂಲಕ ಜೀವನ ಸಾರ್ಥಕವಾಗಬೇಕು. ನೆಲ, ಜಲ, ನಾಡು- ನುಡಿಯ ಸಂರಕ್ಷಣೆ ರಾಷ್ಟ್ರೀಯ ಭಾವೈಕ್ಯತೆ ,ಸಹಕಾರ ಮನೋಭಾವ ಮೂಡಿಸುವ ವೇದಿಕೆಯಾದ ಎನ್ ಎಸ್ ಎಸ್ , ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನದೊಂದಿಗೆ ನಾಯಕತ್ವ ಗುಣವನ್ನು ಬೆಳೆಸಲು ಪೂರಕವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲೆಂದು ಸಂದೇಶವನ್ನಿತ್ತರು. ಈ ಸಂದರ್ಭ ವೇದಿಕೆಯಲ್ಲಿ ಶ್ರೀ ಸುಬ್ರಹ್ಮಣ್ಯ-ಪ್ರಾಂಶುಪಾಲರು,ಬಿಜಿಎಸ್ ಕಾಲೇಜು ಕಾವೂರು, ದಕ್ಷಿಣ ಕನ್ನಡ ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿಗಳಾದ ಶ್ರೀ ಅರುಣ್ ಕುಮಾರ್, ಉಡುಪಿ ಜಿಲ್ಲಾ ಎನ್ ಎಸ್ ಎಸ್ ನೋಡಲ್ ಅಧಿಕಾರಿಗಳಾದ ಶ್ರೀ ಜಯಶಂಕರ್, ಮೈಸೂರು ಜಿಲ್ಲೆಯ ಎನ್ ಎಸ್ ಎಸ್ ನೋಡಲ್ ಅಧಿಕಾರಿಗಳಾದ ಶ್ರೀ ಮಹೇಶ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಪುನಶ್ಚೇತನ ಕಾರ್ಯಗಾರದ ಯಶಸ್ವಿ ಸಂಘಟನೆಗೆ ಸರ್ವ ರೀತಿಯಿಂದಲೂ ಸಹಕರಿಸಿದ ಯೆನೆಪೋಯ ಆಡಳಿತ ಮಂಡಳಿಯ ಪರವಾಗಿ ಯೆನೆಪೋಯ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರನ್ನು ಹಾಗೂ ಕಾರ್ಯಗಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರ್ಯಕ್ರಮಾ ಧಿಕಾರಿಗಳಾದ ಶ್ರೀ ಅನೂಪ್, ಶ್ರೀಮತಿ ಅಕ್ಷತಾ ಅಯಿಲ್ ಇವರನ್ನು ರಾಜ್ಯ ಸಂಯೋಜನಾಧಿಕಾರಿಗಳು ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಿದರು. ಯೆನೆಪೋಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಕೀಫಾ ಲುಬ್ನಾ,ಫಾತಿಮಾ ರಿಫಾ ಇವರು ಪ್ರಾರ್ಥನೆಯನ್ನು ನೆರವೇರಿಸಿದರೆ, ಕನ್ನಡ ಉಪನ್ಯಾಸಕರಾದ ಶ್ರೀ ಅಬ್ದುಲ್ ರಹಮಾನ್ ನೆರೆದ ಸರ್ವರನ್ನು ಸ್ವಾಗತಿಸಿದರು.ಶ್ರೀಮತಿ ಅಕ್ಷತಾ ಅಯಿಲ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಉಡುಪಿ ಜಿಲ್ಲಾ ನೋಡಲ್ ಅಧಿಕಾರಿಗಳಾದ ಶ್ರೀ ಜಯಶಂಕರ್ ವಂದಿಸಿದರು. ತದನಂತರ ಎರಡು ದಿನಗಳ ಕಾಲ ಎನ್ ಎಸ್ ಎಸ್ ಗೆ ಸಂಬಂಧಿಸಿದಂತೆ ವಿವಿಧ ವಿಷಯಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿಗಳಿಂದ ನೆರವೇರಿತು. ಮೊದಲನೆಯ ದಿನ ಎನ್ಎಸ್ಎಸ್ ಇತಿಹಾಸ, ಧ್ಯೇಯೋದ್ದೇಶ ಹಾಗೂ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ ಪಾತ್ರ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ವಿನೀತ ರೈ -ಮಾಜಿ ಎನ್ ಎಸ್ ಎಸ್ ಸಂಯೋಜಕರುಗಳು ಮಂಗಳೂರು ವಿಶ್ವವಿದ್ಯಾನಿಲಯ ಇವರು ನಡೆಸಿಕೊಟ್ಟರು. ತದನಂತರದಲ್ಲಿ ಶ್ರೀ ನರೇಂದ್ರ ಬಡಶೇಷಿ -ನಿವೃತ್ತ ಪ್ರಾಂಶುಪಾಲರು ಕಲಬುರ್ಗಿ ಇವರಿಂದ ಪರಿಣಾಮಕಾರಿ ದೈನಂದಿನ ಚಟುವಟಿಕೆಗಳ ಅನುಷ್ಠಾನ, ರಾಜ್ಯ ಸಂಯೋಜನಾಧಿಕಾರಿಗಳಾದ ಶ್ರೀ ಶಿವಮಾದಯ್ಯ ಇವರಿಂದ ಲೆಕ್ಕಪತ್ರ ನಿರ್ವಹಣೆ, ಶ್ರೀ ಲಯನ್ ದಿನೇಶ್- ಪ್ರಾಂಶುಪಾಲರು ಸರ್ಕಾರಿ ಪದವಿ ಪೂರ್ವ ಕಾಲೇಜು ನಂಜನಗೂಡು ಇವರಿಂದ ವಾರ್ಷಿಕ ವಿಶೇಷ ಶಿಬಿರದ ನಿರ್ವಹಣೆ, ಶ್ರೀ ಯತಿರಾಜ್- ಉಪನ್ಯಾಸಕರು ಹಾಗೂ ಕಾರ್ಯಕ್ರಮಾಧಿಕಾರಿಗಳು ಪದುವ ಪದವಿ ಪೂರ್ವ ಕಾಲೇಜು ಮಂಗಳೂರು ಇವರಿಂದ PFMS ನಿರ್ವಹಣೆ ಕುರಿತಂತೆ ಉಪನ್ಯಾಸ ತರಬೇತಿ ಕಾರ್ಯಕ್ರಮ ನಡೆದವು. ಅದೇ ರೀತಿ ಎರಡನೆಯ ದಿನದ ಕಾರ್ಯಾಗಾರದಲ್ಲಿ ಶ್ರೀಮತಿ ಸೀಮಾ ಪ್ರಭು ಎನ್- ದಕ್ಷಿಣ ಕನ್ನಡ ಜಿಲ್ಲಾ ನೋಡಲ್ ಅಧಿಕಾರಿಗಳು ಇವರಿಂದ ಮೈ ಭಾರತ್ ಪೋರ್ಟಲ್ ನಿರ್ವಹಣೆ, ಶ್ರೀ ಸೋಮಶೇಖರ್- ಪ್ರಾಂಶುಪಾಲರು ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಸುಬ್ರಹ್ಮಣ್ಯ ಇವರಿಂದ ಕಾಲೇಜು ಹಂತದಲ್ಲಿ ಎನ್ಎಸ್ಎಸ್ ನ ಪರಿಣಾಮಕಾರಿ ಅನುಷ್ಠಾನದಲ್ಲಿ ಕಾರ್ಯಕ್ರಮಾಧಿಕಾರಿಗಳ ಪಾತ್ರ,ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ, ಶ್ರೀ ಪ್ರದೀಪ್- ಎನ್ ಎಸ್ ಎಸ್ ಜಿಲ್ಲಾ ನೋಡಲ್ ಅಧಿಕಾರಿಗಳು ಚಿಕ್ಕಮಗಳೂರು ಇವರಿಂದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ, ಡಾ. ಜಯಶಂಕರ್ – ಉಡುಪಿ ಜಿಲ್ಲಾ ನೋಡಲ್ ಅಧಿಕಾರಿಗಳು ಇವರಿಂದ ನಾಯಕತ್ವ ಗುಣ ಮತ್ತು ಎನ್ಎಸ್ಎಸ್ ನಲ್ಲಿ ಅದರ ಪಾತ್ರ, ಶ್ರೀ ಅನೂಪ್- ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳು ಯೆನೆಪೋಯ ಪದವಿ ಪೂರ್ವ ಕಾಲೇಜು ಜೆಪ್ಪಿನಮೊಗರು ಇವರಿಂದ “ನಾನಲ್ಲ- ನೀನು” ಕಾರ್ಯಕ್ರಮಾಧಿಕಾರಿಗಳ ದೃಷ್ಟಿಯಲ್ಲಿ , ಶ್ರೀ ಕೆ ಅಣ್ಣಪ್ಪ – ಕಾರ್ಯಕ್ರಮಾಧಿಕಾರಿಗಳು ವಿಟ್ಲ ಪದವಿ ಪೂರ್ವ ಕಾಲೇಜು ಇವರಿಂದ ಎನ್ಎಸ್ಎಸ್ ಮತ್ತು ವ್ಯಕ್ತಿತ್ವ ವಿಕಸನ, ಕೊನೆಯಲ್ಲಿ ಶ್ರೀ ಶಿವಮಾದಯ್ಯ- ರಾಜ್ಯ ಸಂಯೋಜನಾಧಿಕಾರಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ನೆರವೇರಿತು. ಹೀಗೆ ಎರಡು ದಿವಸಗಳ ಪುನಶ್ಚೇತನ ಕಾರ್ಯಾಗಾರ ಅತ್ಯಂತ ಯಶಸ್ವಿಯಾಗಿ ನಡೆದುದಲ್ಲದೆ, ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ಅಂತಿಮವಾಗಿ ಧನ್ಯತಾ ನುಡಿಯೊಂದಿಗೆ ಪುನಶ್ಚೇತನಾ ಕಾರ್ಯಾಗಾರಕ್ಕೆ ತೆರೆ ಎಳೆಯಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments