ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ತಾಯಿ ಆರೋಗ್ಯ -ಆಟಿ ಆಹಾರ ಎಂಬ ವಿಶೇಷ ಕಾರ್ಯಕ್ರಮ ಸಂಭ್ರಮಾಚರಣೆಯಿಂದ ನಡೆಯಿತು.ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ತೆಂಗಿನ ಹೂವಿನ ಗರಿಯನ್ನು ಅರಳಿಸುವುದರ ಮೂಲಕ ಚಾಲನೆಯನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ.ತಾರಾನಾಥ ಗಟ್ಟಿ ಕಾಪಿಕಾಡ್ ಇವರು ನೀಡಿದರು.
ತುಳುನಾಡಿನ ಸಂಪ್ರದಾಯವನ್ನು ನೆನಪಿಸುವ ಅನೇಕ ವಿಚಾರಗಳು ಇಂದಿನ ಆಧುನಿಕ ಜಗತ್ತಿನಿಂದ ಮರೆಯಾಗುತ್ತಿರುವುದನ್ನು ನಾವೆಲ್ಲರೂ ಗಂಭೀರವಾಗಿ ಪರಿಗಣಿಸಿ,ಅದರ ಉಳಿವಿಗಾಗಿ ಹೋರಾಡುವ ಪಣತೊಡಬೇಕು ಎಂದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಗಳಾಗಿರುವಂತಹ ಶ್ರೀ.ಪದ್ಮರಾಜ್ ರಾಮಯ್ಯ ಪೂಜಾರಿಯವರು ಸುಮಾರು ನಲವತ್ತೇಳು ವಿವಿಧ ಖಾದ್ಯಗಳನ್ನು ಸ್ವತಹ ತಯಾರಿಸಿದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ಸಿಬ್ಬಂದಿಗಳ ಪ್ರಯತ್ನದ ವಿಡಿಯೋ ಕ್ಲಿಪ್ಪಿಂಗ ನ್ನು ಡಿಜಿಟಲ್ ಉದ್ಘಾಟನೆ ಮಾಡಿದರು.ಅಲ್ಲದೆ ಲೇಡಿಗೋಷನ್ ಆಸ್ಪತ್ರೆ ಕೈಗೊಂಡಿರುವ ಮಹಿಳಾಪರ ಕಾರ್ಯಕ್ರಮಗಳನ್ನು ಶ್ಲಾಘಿಸುತ್ತಾ ,ತಾಯಿ ಆರೋಗ್ಯ ಮತ್ತು ಆಟಿ ಆಹಾರ ವಿಶೇಷ ಕಾರ್ಯಕ್ರಮವು ಮಹಿಳಾ ಶಕ್ತಿ ವರ್ಧನೆ ಮತ್ತು ನಾರೀ ಸಬಲೀಕರಣದಲ್ಲಿ ಆಷಾಡ ಮಾಸದ ಆಹಾರ ಪದಾರ್ಥಗಳ ಬಳಕೆ ಮತ್ತು ಪ್ರಾತ್ಯಕ್ಷಿಕೆ ಬೆಳಕು ಚೆಲ್ಲಲಿದೆ ಎಂದರು. ಮತ್ತೊಬ್ಬ ಗಣ್ಯ ಅತಿಥಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದಂತಹ ಶ್ರೀಮತಿ ಮಮತಾ ಗಟ್ಟಿ ಇವರು ಆಟಿ ತಿಂಗಳ ಈ ಮಾಸದಲ್ಲಿ ತುಳುನಾಡಿನ ಸಂಪ್ರದಾಯವನ್ನು ಗೌರವಿಸುವುದರ ಜೊತೆಯಲ್ಲಿ ಮಹಿಳಾ ಸಂವರ್ಧನೆಯನ್ನು ತಾದಾತ್ಮ್ಯತೆಗೊಳಿಸಿದ ವಿಶೇಷ ಪರಿಕಲ್ಪನೆಯ “ತಾಯಿ ಆರೋಗ್ಯ -ಆಟಿ ಆಹಾರ” ಕಾರ್ಯಕ್ರಮವನ್ನು ಆಯೋಜಿಸಿದ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕರು ಮತ್ತು ಸರ್ವ ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಚಾಲಕರುಗಳಾದ ಶ್ರೀ.ರವೀಂದ್ರ,ಶ್ರೀ.ರಘುನಾಥ್ ರೈ,ಶ್ರೀ.ಹರೀಶ್ ಗಟ್ಟಿ,ಶ್ರೀ.ಟಿಶೋರ್,ಶ್ರೀ.ರಂಜನ್ ಶೆಟ್ಟಿ ಇವರೆಲ್ಲರನ್ನು ಆಟಿ ಸಮ್ಮಾನ್ -2026 ಎಂಬ ನಾಮಧೇಯದಿಂದ ಗೌರವಾಭಿನಂದನೆಯನ್ನು ಸಲ್ಲಿಸಲಾಯಿತು.ಲೇಡಿಗೋಶನ್ ಸಿಬ್ಬಂದಿಗಳಿಂದ ಸುಮಾರು ಇಪ್ಪತ್ತೈದು ವಿವಿಧ ಮನೋರಂಜನಾ ಕಾರ್ಯಕ್ರಮಗಳು ಈ ಸಮಾರಂಭದ ಜೊತೆ ಸಂಯೋಜಿಸಲ್ಪಟ್ಟು ಕೌಟುಂಬಿಕ ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟ ವಿಶೇಷ ಕ್ಷಣಗಳು ಇದಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೈದ್ಯಕೀಯ ಅಧೀಕ್ಷಕರಾದ ಡಾ/ದುರ್ಗಾಪ್ರಸಾದ್.ಎಂ.ಆರ್.ಇವರು ಮಾತನಾಡುತ್ತಾ ತಾಯಿ ಆರೋಗ್ಯವನ್ನು ಕಾಪಿಡುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರದ ಪಾತ್ರವನ್ನು ಜನಮಾನಸಕ್ಕೆ ಮುಟ್ಟಿಸುವ ಆರೋಗ್ಯ ಕ್ಷೇತ್ರದ ವಿಶೇಷ ಕೈಂಕರ್ಯ ಇದಾಗಿದೆ ಎಂದರು.ಮಹಿಳಾ ಸಿಬ್ಬಂದಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ ಇಂಥಹ ಕಾರ್ಯಕ್ರಮಗಳು ನಿರಾಳತೆ, ನೆಮ್ಮದಿ ಹಾಗೂ ಮನಃಶಾಂತಿಯ ಸ್ಥಿತಿಯನ್ನು ಸಿಬ್ಬಂದಿಗಳಿಗೆ ತಂದು ಕೊಟ್ಟಾಗ ಸಾರ್ವಜನಿಕವಾಗಿ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಸಿಬ್ಬಂದಿಗಳಿಂದ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಸಿಬ್ಬಂದಿಗಳಾದ ಸೋಮನಾಥ್ ಹಾಗೂ ಅಶೋಕ್ ಅವರ ತಂಡದ ಸ್ಯಾಕ್ಸೋಫೋನ್ ವಾದನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.ಸದ್ರಿ ಕಲಾವಿದರನ್ನು ಸತ್ಕರಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಶ್ರೀಮತಿ ಪ್ರಮೀಳಾ ಈಶ್ವರ್ , ಗುರು ಬೆಳದಿಂಗಳು ಸೇವಾ ಟ್ರಸ್ಟ್ ಇದರ ಮಾಜಿ ಅಧ್ಯಕ್ಷರಾದ ಶ್ರೀಮತಿ ಶುಭಾ,ನಿವಾಸಿ ವೈದ್ಯಾಧಿಕಾರಿಗಳಾದ ಡಾ/ಜಗದೀಶ್,ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ/ಶ್ರದ್ಧಾ ಶೆಟ್ಟಿ,ಮಕ್ಕಳ ತಜ್ಞರಾದ ಡಾ/ನೂತನ್ ಕಾಮತ್,ಶುಶ್ರೂಷಾಧೀಕ್ಷಕರಾದ ಶ್ರೀಮತಿ ಗೀತಾ,ನರ್ಸಿಂಗ್ ಸುಪರ್ ವೈಸರ್ ಶ್ರೀಮತಿ ಮಲ್ಲಿಕಾ,ಹಿರಿಯ ತಜ್ಞರಾದ ಡಾ/ದಯಾನಂದ್ ಉಪಸ್ಥಿತರಿದ್ದರು. ಶ್ರೀಮತಿ ಅಂಬಿಕಾ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಸವಿತಾ, ಶ್ರೀಮತಿ ಮಹಾಲಕ್ಷ್ಮೀ,ಶ್ರೀಮತಿ ಹೇಮಲತಾ,ಶ್ರೀಮತಿ ವಿನೀತಾ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.ಶ್ರೀಮತಿ ವಿದ್ಯಾ ಪ್ರಾರ್ಥಿಸಿದರು.

