ಶಾಲೆ, ಕಾಲೇಜು, ಬಸ್ಸು ನಿಲ್ದಾಣಗಳಿಗೆ ಹತ್ತಿರದಲ್ಲಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚುವಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಕಟ್ಟಳೆಯಿಟ್ಟಿದ್ದಾರೆ.
ವಿದ್ಯಾ ಸಂಸ್ಥೆಗಳು ಮತ್ತು ಬಸ್ಸು ನಿಲ್ದಾಣಗಳಿಗೆ 500 ಮೀಟರ್ಗಳಿಗಿಂತ ಹತ್ತಿರದಲ್ಲಿ ಈ 717 ಮದ್ಯದಂಗಡಿಗಳು ಇರುವುದು ಆರೋಗ್ಯಕರ ಸಮಾಜಕ್ಕೆ ಪೂರಕವಾಗಿಲ್ಲ ಎಂದು ವಿಜಯ್ ಅವರು ತನ್ನ ಆದೇಶದಲ್ಲಿ ಹೇಳಿದ್ದಾರೆ.

ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿ ಇನ್ನು ಎರಡು ವಾರದೊಳಗೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಮದ್ಯದಂಗಡಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಟಾಸ್ಮಾಕ್- ತಮಿಳುನಾಡು ರಾಜ್ಯ ಮಾರ್ಕೆಟಿಂಗ್ ಕಾರ್ಪೊರೇಶನ್ನು 4,765 ಚಿಲ್ಲರೆ ಮದ್ಯ ಮಾರಾಟದ ಅಂಗಡಿಗಳನ್ನು ನಡೆಸುತ್ತಿದೆ. ಅವುಗಳಲ್ಲಿ ಈ 717 ವಿದ್ಯಾಸಂಸ್ಥೆಗಳು ಹಾಗೂ ಬಸ್ಸು ನಿಲ್ದಾಣಗಳಿಗೆ ಪಕ್ಕದಲ್ಲಿವೆ ಎಂದು ಅವುಗಳನ್ನು ಮುಚ್ಚಲು ಹೇಳಲಾಗಿದೆ.

ಅವುಗಳಲ್ಲಿ ಕೆಲವು ಆರಾಧನಾಲಯಗಳಿಗೆ ಪಕ್ಕದಲ್ಲಿರುವುದು ಕೂಡ ಮುಚ್ಚಲು ಹೇಳುವುದಕ್ಕೆ ಕಾರಣ ಎಂದು ತಿಳಿಸಲಾಗಿದೆ. 276 ಆರಾಧನಾಲಯಗಳ ಬಳಿ, 186 ವಿದ್ಯಾ ಸಂಸ್ಥೆಗಳ ಬಳಿ, 255 ಬಸ್ಸು ನಿಲ್ದಾಣಗಳಿಗೆ ಸಮೀಪದಲ್ಲಿ ಇದ್ದು, ಇವೆಲ್ಲ ಸಾರ್ವಜನಿಕ ಆತಂಕವನ್ನು ಸಹ ಸೃಷ್ಟಿಸುತ್ತಿವೆಯಂತೆ.

