ಭಯಂಕರ ಮಳೆಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಮೋತೆವಾಡಿ ಗ್ರಾಮದ ಮಾರ್ಗುದೇವಿ ದೇವಾಲಯದ ಗೋಡೆ ಬಿದ್ದು ಆರು ಮಂದಿ ಜೀವಂತ ಗೋರಿಯಾದರು.

ಮೋತೆವಾಡಿ ಗ್ರಾಮದಲ್ಲಿ ಭಾರೀ ಮಳೆ ಸುರಿದುದರಿಂದ ಹಲವು ಅನಾಹುತವಾಗಿವೆ. ಊರಿನ ಮಾರ್ಗುಮಾತ ಆಲಯದ ಗೋಡೆಯು ಮಳೆಯ ಹೊಡೆತಕ್ಕೆ ಮೈಮೇಲೆ ಬಿದ್ದುದರಿಂದ ಅಲ್ಲಿದ್ದ ಆರು ಭಕ್ತರು ಮರಣ ಹೊಂದಿದರಲ್ಲದೆ ಹದಿನಾಲ್ಕರಷ್ಟು ಜನರು ಗಾಯಗೊಂಡರು.

ಮಾರ್ಗುಮಾತ ಆಲಯಕ್ಕೆ ಮಂಗಳವಾರ ತುಂಬ ಜನ ಬರುತ್ತಾರೆ; ರಾತ್ರಿಯಾದರೂ ಜನರ ಸರತಿಯ ಸಾಲು ಇರುತ್ತದೆ. ಒಮ್ಮೆಗೇ ಬಲವಾದ ಗಾಳಿ ಸಹಿತ ಮಳೆ ಸುರಿಯಿತು. ಕೊಡಸುರಿ ಮಳೆಯ ಜೊತೆಗೆ ಸಿಡಿಲು ಮಿಂಚು ಪಳಪಳಿಸಿತು, ಬಡಬಡಿಸಿತು.

ಆಗ ಆಲಯದಲ್ಲಿ ೩೫೦ರಷ್ಟು ಜನರು ಇದ್ದರು. ಭಕ್ತರೆಲ್ಲ ಮಳೆಯ ಕಾರಣಕ್ಕೆ ಗೋಡೆಯ ಪಕ್ಕದಲ್ಲಿ ಹೋಗಿ ನಿಂತಿದ್ದರು. ಒಮ್ಮೆಗೇ ತಗಡಿನ ಶೀಟುಗಳು ಹಾರಿದವು ಜೊತೆಗೆ ಗೋಡೆಯು ಬುಡುಕ್ಕ ಎಂದು ನಿಂತಿದ್ದ ಜನರ ಮೇಲೆ ಬಿತ್ತು ಎಂದು ಜಿಲ್ಲಾ ಪೋಲೀಸು ವರಿಷ್ಠರಾದ ತುಶಾರ್ ದೋಶಿ ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಕ್ಷಿಪ್ರವಾಗಿ ನಡೆದಿದೆ.
