ವಿಶ್ವಕಪ್ ಗೆದ್ದ ಕಬಡ್ಡಿ ಆಟಗಾತಿ೯ ಧನಲಕ್ಷ್ಮೀಗೆ ಆಳ್ವಾಸ್ ನಲ್ಲಿ ಅಭಿನಂದನೆ
ಮೂಡುಬಿದಿರೆ: ಢಾಕಾದಲ್ಲಿ ನಡೆದ ದ್ವಿತೀಯ ಕಬಡ್ಡಿ ವಿಶ್ವಕಪ್ನಲ್ಲಿ ಭಾರತೀಯ ಮಹಿಳಾ ತಂಡವನ್ನು ಪ್ರತಿನಿಧಿಸಿ ವಿಶ್ವಕಪ್ ಗೆದ್ದ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ನ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರಿಗೆ ಅಭಿನಂದನಾ ಸಮಾರಂಭವು ಸೋಮವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರು ಮಾತನಾಡಿ, ಕ್ರೀಡಾ ಸಾಧಕರಿಗೆ ಮತ್ತಷ್ಟು ಉತ್ತೇಜನ ನೀಡಲು ಅನೇಕ ರಾಜ್ಯ ಸರ್ಕಾರಗಳು (ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ಕೇರಳ) ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುತ್ತಿರುವುದು ಶ್ಲಾಘನೀಯ. ಇದರಿಂದ ಆ ರಾಜ್ಯಗಳಲ್ಲಿ ಕ್ರೀಡೆಗೆ ಯುವ ಸಮುದಾಯದ ಆಕರ್ಷಣೆ ಹೆಚ್ಚಾಗಿ, ಮೂಲಸೌಕರ್ಯ ಅಭಿವೃದ್ಧಿಗೊಂಡು ಪದಕಗಳ ಪ್ರಮಾಣವೂ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರವೂ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡಲು ಮುಂದಾಗಬೇಕು. ಇದು ಕ್ರೀಡಾಪಟುವಿಗೆ ಆರ್ಥಿಕ ಭದ್ರತೆ ನೀಡುವುದಷ್ಟೇ ಅಲ್ಲದೆ, ಅವರ ಸಾಧನೆಗೆ ಗೌರವ ಹಾಗೂ ಭವಿಷ್ಯಕ್ಕೆ ಭದ್ರ ನೆಲೆ ನೀಡಿದಂತಾಗುತ್ತದೆ. ಯುವ ಶಕ್ತಿಯನ್ನು ದೇಶದ ಪ್ರಗತಿಗೆ ಬಳಸಲು ಸರ್ಕಾರ, ಇಲಾಖೆಗಳು ಹಾಗೂ ಕ್ರೀಡಾ ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡುವುದು ಅಗತ್ಯ ಎಂದರು.
ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಗೌರವಾಧ್ಯಕ್ಷ ರಾಕೇಶ್ ಮಲ್ಲಿ ಅವರು ಧನಲಕ್ಷ್ಮೀಯವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಅವರಿಗೆ ಸರ್ಕಾರಿ ಹುದ್ದೆ ದೊರಕಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಒತ್ತಡ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಧನಲಕ್ಷ್ಮೀ ಪೂಜಾರಿ, “ವಿಶ್ವ ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಅವಕಾಶ ದೊರೆತ ಕ್ಷಣ ನನ್ನ ಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿತ್ತು” ಎಂದು ಭಾವಪೂರ್ಣವಾಗಿ ನುಡಿದರು. ತಮ್ಮ ಯಶಸ್ಸಿನ ಹಿಂದೆ ಆಳ್ವಾಸ್ ಸಂಸ್ಥೆಯ ಪಾತ್ರವನ್ನು ಉಲ್ಲೇಖಿಸಿ, “ಆಳ್ವಾಸ್ ಸೇರದಿದ್ದರೆ ಇಂತಹ ಸಾಧನೆ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಸೇರಿದ್ದರಿಂದ ಕ್ರೀಡೆ ಮಾತ್ರವಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿಯೂ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು” ಎಂದರು.
ಈ ಸಂದರ್ಭದಲ್ಲಿ ಧನಲಕ್ಷ್ಮೀ ಹಾಗೂ ಅವರ ಪೋಷಕರನ್ನು ಸನ್ಮಾನಿಸಿ, ಆಳ್ವಾಸ್ ಸಂಸ್ಥೆಯ ವತಿಯಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಉದ್ಯಮಿ ನಾರಾಯಣ ಪಿ.ಎಂ., ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆಯ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಉಪಾಧ್ಯಕ್ಷ ಸುದರ್ಶನ್, ಧನಲಕ್ಷ್ಮೀ ಅವರ ಕೋಚ್ ಹಂಸವತಿ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮಂಗಳೂರು, ಮೂಡುಬಿದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ (ಮೂಡುಬಿದಿರೆ) ಇವರ ಸಂಯುಕ್ತ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದ.ಕ. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ನ ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದೈಹಿಕ ಶಿಕ್ಷಕ ನವೀನ್ಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.


















