ಉಡುಪಿ ಚಿಟ್ಪಾಡಿಯ ಲಕ್ಷ್ಮೀ ಸಭಾಭವನದಲ್ಲಿ ಉಡುಪಿ ಯುವವಾಹಿನಿ ನೀಡುವ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ನೀಡಿಕೆ ಸಂಪನ್ನವಾಯಿತು. ಜಾನಪದ ಸಂಶೋಧಕ, ವಿದ್ವಾಂಸರಾದ ಡಾ. ಕೆ. ಅಭಯಕುಮಾರ್ ಅವರಿಗೆ ಜಾನಪದ ವಿದ್ವಾಂಸ ಪ್ರಶಸ್ತಿ ಸಂದಿತು. ಆರ್ಟ್ ಮಾಸ್ಟರ್ ಕಲ್ಮಾಡಿ ಶೇಖರ ಪೂಜಾರಿ ಅವರಿಗೆ ಜಾನಪದ ಕಲಾವಿದ ಪ್ರಶಸ್ತಿ ಸಂದಿತು.

ಪ್ರಾಧ್ಯಾಪಕರಾದ ಡಾ. ದುಗ್ಗಪ್ಪ ಕಜೆಕಾರ್ ಅವರು ಅಭಿನಂದನಾ ನುಡಿ ನುಡಿದರು. ಪ್ರಶಸ್ತಿ ಪ್ರಕಟವಾದಾಗ ಕೆಲವರು ನಿಮಗೆ ನಾವು ನೆನಪಾಗುವುದಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಈ ಪ್ರಶಸ್ತಿಯ ಗಣ್ಯತೆಯಿಂದಾಗಿ ಇದನ್ನು ಬಯಸುವವರು ಇದ್ದಾರೆ. ಆದರೆ ಅರ್ಹರು ಇರುವಂತೆ ಹೆಚ್ಚು ಅರ್ಹರಿಗೆ ಇದು ಸಂದಿದೆ ಎಂದು ಅವರು ಹೇಳಿದರು.
ಹಿರಿಯ ಸಾಹಿತಿ ಅಂಶುಮಾಲಿ ಮಣಿಪಾಲ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಉಡುಪಿ ಯುವವಾಹಿನಿ ಅಧ್ಯಕ್ಷರಾದ ವಿನೋದ್ ಮಂಚಿ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ. ಸುರೇಖಾ ಕೆ, ಯುವವಾಹಿನಿ ಕೇಂದ್ರ ಸಮಿತಿಯ ಅಶೋಕ ಕುಮಾರ್ ಪಡ್ಪು ಮುಖ್ಯ ಅತಿಥಿಗಳಾಗಿದ್ದರು. ಜಾನಪದ ವಿದ್ವಾಂಸ ಬನ್ನಂಜೆ ತನ್ನ ಹೆಸರಿನ ಪ್ರಶಸ್ತಿಗೆ ಸಾಕ್ಷಿಯಾದರು.
ಪ್ರಶಸ್ತಿ ಸಮಿತಿಯ ಅಧ್ಯಕ್ಷರಾದ ಮುದ್ದು ಮಾಡುಬೆಳ್ಳೆ ಅವರು ಮಾತನಾಡಿ ಪ್ರಶಸ್ತಿ ನಡೆದು ಬಂದ ದಾರಿಯನ್ನು ವಿವರಿಸಿದರು. ಕಾರ್ಯಕ್ರಮದ ಸಂಚಾಲಕರಾದ ಭಾಸ್ಕರ ಸುವರ್ಣ ಮೊದಲು ಎಲ್ಲರನ್ನೂ ಸ್ವಾಗತಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಅಭಯಕುಮಾರ್ ಅವರು ನನ್ನ ಸಂಶೋಧನೆಯು ಸಿದ್ಧಾಂತ ಆಧಾರಿತ. ಸಿದ್ಧಾಂತದ ಚೌಕಟ್ಟಿನ ಮೇಲೆ ಮಾಡಿದರೆ ಮಾತ್ರ ಜಾನಪದ ಸಂಶೋಧನೆಗೆ ಒಂದು ನೆಲೆ ಬೆಲೆ.
ಸಿದ್ಧಾಂತ ಮುಟ್ಟದೆ ಸಾಕಷ್ಟು ಡಾಕ್ಟರೇಟ್‌ಗಳು ಬಂದಿವೆ. ಕೋಟಿ ಚೆನ್ನಯ ಅಧ್ಯಯನ ಎಂದರೆ ಪ್ರದರ್ಶನ ಸಿದ್ಧಾಂತ ಮಾತ್ರವಲ್ಲ. ಅದು ನಮ್ಮ ಸಾಮಾಜಿಕ ಸಂಸ್ಕೃತಿಯನ್ನು ತಿಳಿಸುತ್ತದೆ. ಆ ನಿಟ್ಟಿನ ಆಳದ ಅಧ್ಯಯನ ಬರಬೇಕು. ನೇಮಕ್ಕೆ ಹೋಗುವವರಲ್ಲ, ಅವರು ಆ ಆರಾಧನೆಯಲ್ಲಿ ಒಂದಾಗಿರುತ್ತಾರೆ. ಅರಿಸ್ಟಾಟಲ್, ಪ್ಲೇಟೋರಿಂದ ಹಿಡಿದು ಬಂದ ಸಿದ್ಧಾಂತಕ್ಕೆ ಪ್ರಚಾರ ಈಗಲೂ ಅಗತ್ಯವಿದೆ. ಆದರೆ ಅಗತ್ಯದ ಸಿದ್ಧಾಂತ ಪ್ರಚಾರಕರು ಇಂದು ಇಲ್ಲ ಎಂದು ಹೇಳಿದರು.

