ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿಯಲ್ಲಿ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಮಗನನ್ನು ಕೊಲೆ ಮಾಡಿ, ನಾಪತ್ತೆಯಾಗಿದ್ದಾನೆಂದು ದೂರು ಕೊಟ್ಟ ತಾಯಿಯೇ ಕೊಲೆಗಾತಿ ಎಂಬುದು ಬೆಳಕಿಗೆ ಬಂದಿದೆ.ಈ ಪ್ರಕರಣವು ವಾರದವರೆಗೆ ಬೂದಿ ಮುಚ್ಚಿದ ಕೆಂಡವಾಗಿತ್ತು. ಆದವಾನಿ ಮಂಡಲದ ಜಿ ಹೊಸಹಳ್ಳಿ ಗ್ರಾಮದ ಹದಿನೈದರ ಹುಡುಗ ವೀರೇಂದ್ರ ಕೊಲೆಯಾಗಿದ್ದ. ಮಗ ನಾಪತ್ತೆಯಾಗಿದ್ದಾನೆ ಎಂದು ತಾಯಿ ಗಂಗಮ್ಮ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲ ಬುದ್ಧಿವಂತಿಕೆಯಿಂದ ಮಗನ ಹುಡುಕುವಿಕೆ ತಡವಾಗುತ್ತಿದೆ ಎಂದು ಹೈಕೋರ್ಟಿಗೂ ಅರ್ಜಿ ಹಾಕಿದ್ದರು. ವೀರೇಂದ್ರನ ಸಾವಿನ ಬಗೆಗೆ ನಾನಾ ಒಳದೂರುಗಳು ಬಂದುದರಿಂದ ವಿಶೇಷ ತನಿಖಾ ದಳವನ್ನು ರಚಿಸಲಾಯಿತು.ಗಂಗಮ್ಮನಿಗೆ ದಾಸಪ್ಪ ಎಂಬವನ ಜೊತೆಗೆ ಅಕ್ರಮ ಸಂಬಂಧ ಇತ್ತು.

ಮಗ ವೀರೇಂದ್ರ ಈ ವಿಷಯವಾಗಿ ತಾಯಿಯ ಜೊತೆಗೆ ಮತ್ತೆ ಮತ್ತೆ ಜಗಳವಾಡುತ್ತಿತ್ತು. ಗಂಗಮ್ಮ ದಾಸಪ್ಪ ಕೂಡಿ ಚರ್ಚಿಸಿ ವೀರೇಂದ್ರನನ್ನು ಕೊಂದು, ಗ್ರಾಮದ ಹೊರ ಭಾಗದ ಮಸಣದ ಮೂಲೆಯಲ್ಲಿ ಗುಟ್ಟಾಗಿ ಹೂತು ಹಾಕಿದ್ದರು. ಅದರ ಜೊತೆಗೆ ಪೋಲೀಸರ ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಹೈಕೋರ್ಟು ಕಟ್ಟಳೆಯಂತೆ ವಿಶೇಷ ತನಿಖಾ ದಳ ರಚಿಸಿದ ಮೇಲೆ ಗುಟ್ಟೆಲ್ಲ ರಟ್ಟಾಯಿತು.ಗಂಗಮ್ಮ ದಾಸಪ್ಪರ ಸಂಬಂಧ, ಅವರ ಇತ್ತೀಚಿನ ನಡವಳಿಕೆ ಬಗೆಗೆ ಊರಿನಲ್ಲಿ ಕತೆಯ ಮೇಲೆ ಕತೆ ಹರಡಿದ್ದವು. ಅವರೆಲ್ಲರ ಸಾಕ್ಷ್ಯ ಪಡೆದು ಗಂಗಮ್ಮ, ದಾಸಪ್ಪರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ಗುಟ್ಟು ರಟ್ಟಾಗಿದೆ. ಕೊಳೆಯುತ್ತಿದ್ದ ಶವವನ್ನು ಹೊರತಗೆದು ತನಿಖೆ ಮುಂದುವರಿದಿದೆ. ಗಂಗಮ್ಮ, ದಾಸಪ್ಪ ಕಂಬಿಯ ಹಿಂದೆ ಸೇರಿದ್ದಾರೆ.

