HomeFresh Newsಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರ ಅನ್‌ಟಚೆಬಿಲಿಟಿ ಇನ್ 21 ಸೆಂಚುರಿ ಇಂಡಿಯಾ ಕೃತಿ ಬಿಡುಗಡೆ

ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರ ಅನ್‌ಟಚೆಬಿಲಿಟಿ ಇನ್ 21 ಸೆಂಚುರಿ ಇಂಡಿಯಾ ಕೃತಿ ಬಿಡುಗಡೆ

ಮಂಗಳೂರು ಮೂಲದ ಕಾನೂನು ತಜ್ಞೆ ಡಾ. ಪ್ರೀತಿ ಲೋಲಾಕ್ಷ ನಾಗವೇಣಿ ಅವರ 21ನೇ ಶತಮಾನದ ಭಾರತದಲ್ಲಿ ಅಸ್ಪೃಶ್ಯತೆ (ಅನ್‌ಟಚೆಬಿಲಿಟಿ ಇನ್ 21 ಸೆಂಚುರಿ ಇಂಡಿಯಾ) ಕೃತಿಯನ್ನು ಜಾಗತಿಕ ಖ್ಯಾತಿಯ ಪ್ರಕಾಶನ ಸಂಸ್ಥೆ ‘ರೌಟ್ಲೆಜ್’ ಪ್ರಕಟಿಸಿದ್ದು, ಬಿಡುಗಡೆಗೊಂಡಿದೆ.

ಆಧುನಿಕ ಭಾರತದಲ್ಲಿ ಅಸ್ಪೃಶ್ಯತೆ ಇನ್ನೂ ಮುಂದುವರಿದಿರುವ ವಾಸ್ತವಿಕತೆಯನ್ನು ಕಾನೂನು ಹಾಗೂ ಅಂತರ ರಾಷ್ಟ್ರೀಯ ಮಾನವ ಹಕ್ಕುಗಳ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಅಪರೂಪದ ಸಂಶೋಧನಾ ಕೃತಿ ಇದಾಗಿದೆ. ಈ ಕೃತಿಯಲ್ಲಿ ಅಸ್ಪೃಶ್ಯತೆಯ ಎರಡು ಪ್ರಮುಖ ಸಮಕಾಲೀನ ರೂಪಗಳಾದ ಮ್ಯಾನುಯಲ್ ಸ್ಕ್ಯಾವೆಂಜಿಂಗ್ (ಕೈಯಾರೆ ಮಲ ವಿಲೇವಾರಿ) ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ಕುರಿತಾಗಿ ಆಳವಾದ ಅಧ್ಯಯನ ನಡೆಸಲಾಗಿದೆ. ಅಸ್ಪೃಶ್ಯತೆ ಭಾರತದ ಇತಿಹಾಸದ ಭಾಗವಾಗಿಬಿಟ್ಟಿದೆ ಎಂಬ ಸಾಮಾನ್ಯ ನಂಬಿಕೆಯನ್ನು ಪ್ರಶ್ನಿಸಿರುವ ಲೇಖಕಿ, ಸಂವಿಧಾನಾತ್ಮಕ ಖಾತರಿಗಳು ಹಾಗೂ ಕಾನೂನುಗಳಿದ್ದರೂ ಸಹ ಅಸ್ಪೃಶ್ಯತೆ ಇಂದು ಬಹಿರಂಗವಾಗಿಯೂ, ಸೂಕ್ಷ್ಮ ಹಾಗೂ ಪರೋಕ್ಷ ರೂಪಗಳಲ್ಲಿಯೂ ಮುಂದುವರಿದಿದೆ ಎಂದು ಪ್ರತಿಪಾದಿಸಿದ್ದಾರೆ.

ಸಮಗ್ರ ಕಾನೂನು ಅಧ್ಯಯನ, ಸಾಮಾಜಿಕ-ಕಾನೂನು ಸಂಶೋಧನೆ ಹಾಗೂ ವಿವಿಧ ಹಿತಾಸಕ್ತಿದಾರರೊಂದಿಗೆ ನಡೆಸಿದ ಸಂದರ್ಶನಗಳ ಆಧಾರದ ಮೇಲೆ ರಚಿಸಲಾದ ಈ ಕೃತಿ, ಅಸ್ಪೃಶ್ಯತೆ ಕೇವಲ ಸಮಾಜದ ಅತ್ಯಂತ ಅವಮಾನಿತ, ಶೋಷಿತ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳನ್ನಷ್ಟೇ ಅಲ್ಲದೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ವಿದ್ಯಾವಂತ ದಲಿತ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನೂ ಬಾಧಿಸುತ್ತಿದೆ ಎಂಬುದನ್ನು ದಾಖಲಿಸಿದೆ.

ದಲಿತರ ಮೇಲಿನ ತಾರತಮ್ಯ ಕುರಿತು ಸಮಾಜಶಾಸ್ತ್ರೀಯ, ರಾಜಕೀಯ ಹಾಗೂ ಐತಿಹಾಸಿಕ ಅಧ್ಯಯನಗಳು ಸಾಕಷ್ಟು ನಡೆದಿದ್ದರೂ, ಅಸ್ಪೃಶ್ಯತೆಯನ್ನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ದೃಷ್ಟಿಕೋನದಿಂದ ವಿಶ್ಲೇಷಿಸಿರುವ ಅಪರೂಪದ ಕೃತಿ ಇದಾಗಿದೆ. ಅಸ್ಪೃಶ್ಯತೆಯನ್ನು ಕೇವಲ ಸಾಮಾಜಿಕ, ಆರ್ಥಿಕ, ರಾಜಕೀಯ ಅಥವಾ ಸಾಂಸ್ಕೃತಿಕ ಸಮಸ್ಯೆಯಾಗಿ ಮಾತ್ರವಲ್ಲದೆ, ಕಾನೂನು ವ್ಯವಸ್ಥೆಯ ವೈಫಲ್ಯವನ್ನೂ ಪ್ರತಿಬಿಂಬಿಸುವ ಗಂಭೀರ ಕಾನೂನು ಸಮಸ್ಯೆಯಾಗಿ ಈ ಕೃತಿ ವಿಶ್ಲೇಷಿಸುತ್ತದೆ.

ಡಾ. ಪ್ರೀತಿಯವರ ಶೈಕ್ಷಣಿಕ ಸಂಶೋಧನೆ ಮತ್ತು ಸಾರ್ವಜನಿಕ ನೀತಿ ಕ್ಷೇತ್ರದ ಕೊಡುಗೆಗಳು ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿವೆ. ಅವರು ಸಲ್ಲಿಸಿದ ಮೌಖಿಕ ಹಾಗೂ ಲಿಖಿತ ಹೇಳಿಕೆಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವ್ಯವಸ್ಥೆಗಳು, ಯುನೈಟೆಡ್ ಕಿಂಗ್‌ಡಮ್ ಸಂಸತ್ತು ಹಾಗೂ ನ್ಯೂಜಿಲೆಂಡ್ ಸಂಸತ್ತಿನ ಚರ್ಚೆಗಳಲ್ಲಿ ಮಹತ್ವದ ಪಾತ್ರ ವಹಿಸಿವೆ.

ವಿಶ್ವಸಂಸ್ಥೆಯ ‘ಮಹಿಳಾ ವಿರೋಧಿ ತಾರತಮ್ಯ ನಿರ್ಮೂಲನಾ ಸಮಿತಿ’ಯ ಮುಂದೆ ಅವರು ಮಂಡಿಸಿದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಎದುರಿಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಹೇಳಿಕೆ ವಿಶೇಷ ಗಮನ ಸೆಳೆದಿತ್ತು. ಇದಲ್ಲದೆ, ಮಹಿಳೆಯರು, ಮಕ್ಕಳು ಹಾಗೂ ಅಂಗವಿಕಲರ ಹಕ್ಕುಗಳ ಪರವಾಗಿಯೂ ಅವರು ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಧ್ವನಿಯೆತ್ತಿದ್ದಾರೆ. ಅವರ ಸಂಶೋಧನಾ ಕೃತಿಗಳನ್ನು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಿತಿ ಹಾಗೂ ಯುನೈಟೆಡ್ ಕಿಂಗ್‌ಡಮ್‌ನ ಹೌಸ್ ಆಫ್ ಲಾರ್ಡ್ಸ್ ಮತ್ತು ಹೌಸ್ ಆಫ್ ಕಾಮನ್ಸ್ ಸಂಸದೀಯ ಸಮಿತಿಗಳು ಉಲ್ಲೇಖಿಸಿವೆ.

ಡಾ. ಪ್ರೀತಿ ಅವರ 19 ಪೀರ್-ರಿವ್ಯೆಡ್ ಸಂಶೋಧನಾ ಲೇಖನಗಳು ಹಾಗೂ ಐದು ಪೀರ್-ರಿವ್ಯೆಡ್ ಪುಸ್ತಕ ಅಧ್ಯಾಯ ಗಳನ್ನು ಅಂತರರಾಷ್ಟ್ರೀಯ ಖ್ಯಾತಿಯ ಪ್ರಕಾಶಕರು ಪ್ರಕಟಿಸಿದ್ದಾರೆ. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ಇಂಟರ್ನ್ಯಾಷನಲ್ ಹೆಲ್ತ್ ರೆಗ್ಯುಲೇಶನ್ಸ್ ಕುರಿತ ಅವರ ಪುಸ್ತಕ ಅಧ್ಯಾಯವು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ -19 ರಿಸರ್ಚ್ ಡಾಟಾಬೇಸ್‌ನಲ್ಲಿ ಸ್ಥಾನ ಪಡೆದಿದೆ. ಅಲ್ಲದೆ, ಅವರ ಎರಡು ಸಂಶೋಧನಾ ಲೇಖನಗಳು ಮತ್ತು ಎರಡು ಪುಸ್ತಕ ಅಧ್ಯಾಯಗಳು ವಿಶ್ವಸಂಸ್ಥೆಯ ಜಿನೀವಾ ಕಚೇರಿಯ ಗ್ರಂಥಾಲಯದ ಕ್ಯಾಟಲಾಗ್‌ನಲ್ಲಿ ಸೂಚ್ಯಂಕಗೊಂಡಿವೆ. ‘21ನೇ ಶತಮಾನದ ಭಾರತದಲ್ಲಿ ಅಸ್ಪೃಶ್ಯತೆ’ ಪುಸ್ತಕವು ಲಂಡನ್‌ನಲ್ಲಿರುವ ಬ್ರಿಟಿಷ್ ಲೈಬ್ರೆರಿಯ ಕ್ಯಾಟ್ ಲಾಗ್‌ನಲ್ಲಿ ಸೂಚ್ಯಂಕಗೊಂಡಿದೆ ಎಂದು ರೌಟ್ಲೆಜ್ ಪ್ರಕಟಿಸಿದೆ.

ಮಾನವ ಹಕ್ಕುಗಳು, ಸಮಾನತೆ, ಜಾತಿ ತಾರತಮ್ಯ ಹಾಗೂ ಭಾರತೀಯ ಕಾನೂನು ವ್ಯವಸ್ಥೆಯ ಕುರಿತು ಗಂಭೀರ ಅಧ್ಯಯನ ನಡೆಸುವ ಸಂಶೋಧಕರು, ನೀತಿ ರೂಪಿಸುವವರು, ಕಾನೂನು ವೃತ್ತಿಪರರು ಹಾಗೂ ವಿದ್ಯಾರ್ಥಿಗಳಿಗೆ ‘ಅನ್‌ಟಚೆಬಿಲಿಟಿ ಇನ್ 21ಸ್ಟ್ ಸೆಂಚುರಿ ಇಂಡಿಯಾ’ ಕೃತಿ ಒಂದು ಮಹತ್ವದ ಆಕರಗ್ರಂಥವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಪುಸ್ತಕವು ರೌಟ್ಲೆಜ್ ವೆಬ್ ಸೈಟ್ ಮತ್ತು ಅಮೆಜಾನ್ ನಲ್ಲಿ ಲಭ್ಯವಿದೆ.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments