ಕಿನ್ನಿಗೋಳಿ:ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಜೂ.13 ಶನಿವಾರದಂದು ಯೋಗ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಯೋಗಗುರು ಶ್ರೀ ಜಯ ಮುದ್ದು ಶೆಟ್ಟಿ ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ಯೋಗದ ಮಹತ್ವವನ್ನು ವಿವರಿಸಿದರು. ಯೋಗವು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಏಕಾಗ್ರತೆ, ಶಿಸ್ತು ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ಹಾಗೂ ಪರಿಚಯವನ್ನು ಮಾಡಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಕಿನ್ನಿಗೋಳಿ ಅಧ್ಯಕ್ಷರಾದ ರೊ. ಸಾಯಿನಾಥ ಶೆಟ್ಟಿ ಮಾತನಾಡಿ, ಶಾಲೆಯಲ್ಲಿ ಯೋಗ ತರಗತಿಗಳನ್ನು ಆರಂಭಿಸಿರುವುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯೋಗ ತರಬೇತುದಾರರಾದ ಶ್ರೀಮತಿ ಮಧುಶ್ರೀ ಎ. ಎಚ್. ಅವರನ್ನು ಶಾಲಾ ಕುಟುಂಬಕ್ಕೆ ಸ್ವಾಗತಿಸಿ, ಶಾಲಾ ಆಡಳಿತದ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೊ. ವಿಲಿಯಂ ಕಾರ್ಡೋಜ, ರೊ .ಸತೀಶ್ ಚಂದ್ರ ಹೆಗ್ಡೆ, ರೊ. ಸ್ವರಾಜ್ ಶೆಟ್ಟಿ ,ರೊ. ಪ್ರವೀಣ್ ಸಾಲಿಯಾನ್, ಶಾಲೆಯ ಆಡಳಿತಾಧಿಕಾರಿ ಭರತ್ ಕುಮಾರ್ ಉಪಸ್ಥಿತರಿದ್ದರು.
ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುನಿತಾ ಗುರುರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಅಶ್ಮಿತಾ ವಂದನಾರ್ಪಣೆ ಸಲ್ಲಿಸಿದರು. ಶ್ರೀಮತಿ ಸರಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

