ಕೇಂದ್ರ ಮಂತ್ರಿ ಜಾರ್ಜ್ ಕುರಿಯನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆ ಅಂಗೀಕರಿಸಿದ್ದಾರೆ.
ಹಿರಿಯ ಬಿಜೆಪಿ ನಾಯಕರಾದ ಜಾರ್ಜ್ ಕುರಿಯನ್ ಅವರ ರಾಜ್ಯ ಸಭಾ ಸದಸ್ಯತ್ವ ಮುಗಿದಿದೆ. ಹೊಸದಾಗಿ ಅವರನ್ನು ರಾಜ್ಯಸಭೆಗೆ ಕಳುಹಿಸುವ ತೀರ್ಮಾನವನ್ನು ಬಿಜೆಪಿ ಮಾಡಿಲ್ಲ.

ಹಾಗಾಗಿ ಅವರು ಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿತ್ತು. ಅದರಂತೆ ಜಾರ್ಜ್ ಕುರಿಯನ್ ರಾಜೀನಾಮೆ ನೀಡಿದ್ದು, ಅದನ್ನು ಪ್ರಧಾನಿ ಸಚಿವಾಲಯದ ಸೂಚನೆಯಂತೆ ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಜಾರ್ಜ್ ಕುರಿಯನ್ ಅವರು ಅಲ್ಪಸಂಖ್ಯಾಕ ವ್ಯವಹಾರ ಹಾಗೂ ಮೀನುಗಾರಿಕೆ ರಾಜ್ಯ ಖಾತೆ ಮಂತ್ರಿಯಾಗಿದ್ದರು.

1980ರಲ್ಲಿ ಬಿಜೆಪಿ ಹುಟ್ಟಿದಾಗಿನಿಂದಲೂ ಪಕ್ಷದ ಸದಸ್ಯರಾಗಿರುವ 65ರ ಪ್ರಾಯದ ಜಾರ್ಜ್ ಕುರಿಯನ್ ಅವರು ೨೦೨೪ರಿಂದ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ಅವರು ಸುಪ್ರೀಂ ಕೋರ್ಟು ವಕೀಲರಾಗಿದ್ದವರು.

ಕೇರಳದ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಏನೂ ಕಾಣಿಸದ್ದರಿಂದ ಅವರಿಗೆ ಮತ್ತೊಮ್ಮೆ ರಾಜ್ಯಸಭಾ ಸ್ಥಾನ ನಿರಾಕರಿಸಲಾಗಿದೆ ಎನ್ನಲಾಗಿದೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ಎಟ್ಟುಮನೂರು ನಗರಸಭೆ ಒಳಗಿನ ನಂಬಿಕುಳಂನಲ್ಲಿ 1960ರಲ್ಲಿ ಹುಟ್ಟಿದ ಕುರಿಯನ್ ಅವರು ವಕೀಲಿಕೆಯಲ್ಲಿ ದಿಲ್ಲಿಗೆ ಹೋದವರು.


