HomeFresh Newsಕೇಂದ್ರ ಸಚಿವ ಸಂಪುಟ ಪುನಾರಚನೆಗೆ ವೇದಿಕೆ ಸಜ್ಜು!

ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ವೇದಿಕೆ ಸಜ್ಜು!

ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ವೇದಿಕೆ ಸಜ್ಜು!

ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆಗಳಾಗುವ ಸಾಧ್ಯತೆ ದಟ್ಟವಾಗಿದ್ದು, ಈ ವಾರಾಂತ್ಯದಲ್ಲಿ ಅಥವಾ ಸೋಮವಾರ ಸಂಪುಟ ಪುನಾರಚನೆಯಾಗುವ ನಿರೀಕ್ಷೆಯಿದೆ. ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಈ ಕುರಿತು ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆರ್‌ಬಿಐ ಮಾಜಿ ಗವರ್ನರ್ ಮತ್ತು ಪ್ರಧಾನ ಮಂತ್ರಿಯವರ ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಅವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ.

ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ (HRD) ಸಚಿವಾಲಯಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ.

ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ಸುಮಾರು ಅರ್ಧ ಡಜನ್ ರಾಜ್ಯ ಸಚಿವರುಗಳಿಗೂ ಸಂಪುಟದಿಂದ ಕೊಕ್ ಸಿಗಬಹುದು.

ಎನ್‌ಡಿಎ ಮೈತ್ರಿಕೂಟಕ್ಕೆ ಆರು ಮಂದಿ ಸಂಸದರನ್ನು ತಂದುಕೊಟ್ಟಿರುವ ಶಿವಸೇನೆಗೆ ಪ್ರತಿಫಲ ಸಿಗಲಿದೆ. ಸಂಸದ ಶ್ರೀಕಾಂತ್ ಶಿಂಧೆ ಅವರಿಗೆ ಸಚಿವ ಸ್ಥಾನ ಲಭಿಸುವ ನಿರೀಕ್ಷೆಯಿದೆ. ಇನ್ನು ಪ್ರತಾಪ್ ರಾವ್ ಜಾಧವ್ ಅವರ ಆರೋಗ್ಯ ಖಾತೆಯನ್ನು ಬದಲಾಯಿಸಿ, ಆ ಸ್ಥಾನಕ್ಕೆ ಸಂಜಯ್ ದಿನಾ ಪಾಟೀಲ್ ಅವರನ್ನು ನೇಮಿಸುವ ಸಾಧ್ಯತೆಯಿದೆ.

ಪಂಜಾಬ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ರವನೀತ್ ಬಿಟ್ಟು ಅವರ ಬದಲಿಗೆ ಆರ್‌ಎಸ್‌ಎಸ್ ನಾಯಕ ತರುಣ್ ಚುಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಪಂಜಾಬ್‌ನ ಆಪ್ (AAP) ಪಕ್ಷದಿಂದ ಬಂದಿರುವ ರಾಘವ್ ಚಡ್ಡಾ ಅಥವಾ ಅಶೋಕ್ ಮಿತ್ತಲ್ (ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ) ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನದ ಮಾತುಕತೆ ನಡೆಯುತ್ತಿದೆ.

ಅನುರಾಗ್ ಠಾಕೂರ್ ಮರುಸೇರ್ಪಡೆ, ಮೀರತ್ ಸಂಸದ ಅರುಣ್ ಗೋವಿಲ್ ಅವರಿಗೆ ಸ್ಥಾನ, ಮತ್ತು ಬಿಹಾರದ ಜನಾರ್ದನ್ ಸಿಂಗ್ ಸಿಗ್ರಿವಾಲ್ ಅವರಿಗೆ ಸಚಿವಗಿರಿಯ ಅವಕಾಶ ಸಿಗಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಮನೋಹರ್ ಲಾಲ್ ಖಟ್ಟರ್ ಅವರು ವಿದ್ಯುತ್ ಖಾತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

ಉತ್ತರ ಪ್ರದೇಶದಲ್ಲಿನ ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಈ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ಈ ವಾರಾಂತ್ಯ ರಾಜಕೀಯವಾಗಿ ಭಾರಿ ಕುತೂಹಲಕ್ಕೆ ಸಾಕ್ಷಿಯಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments