ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದಿರುವ ಭಾರೀ ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ಹಲವು ಭಾಗಗಳಲ್ಲಿ ಮನೆಗಳಿಗೆ ಹಾನಿ ಉಂಟಾಗಿದೆ. ಅನಂತಾಡಿ, ಅಮ್ಟಾಡಿ ಹಾಗೂ ವಿಟ್ಲ ಕಸಬಾ ಗ್ರಾಮಗಳಲ್ಲಿ ಒಟ್ಟು ಮೂರು ಮನೆಗಳು ಹಾನಿಗೊಳಗಾಗಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ.
ಅನಂತಾಡಿಯ ಗೋಳಿಕಟ್ಟೆಯಲ್ಲಿ ಸೀತಾ ರಮೇಶ್ ನಾಯ್ಕ ಅವರ ಮನೆಯ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಮನೆಯ ಒಂದು ಭಾಗಕ್ಕೆ ಹಾನಿಯಾಗಿದೆ.
ಅಮ್ಟಾಡಿ ಗ್ರಾಮದ ಅಜೆಕಲದಲ್ಲಿ ಚಂದ್ರಶೇಖರ ಬಾಬು ಶೆಟ್ಟಿ ಅವರ ಮನೆಯ ಮೇಲೂ ಮರ ಬಿದ್ದು ತೀವ್ರ ಹಾನಿಯಾಗಿದೆ. ಮನೆ ಸುರಕ್ಷಿತವಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದು, ಕುಟುಂಬವು ತಾತ್ಕಾಲಿಕವಾಗಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದೆ.

ವಿಟ್ಲ ಕಸಬಾದ ಅಲಂಗಾರು ಪ್ರದೇಶದಲ್ಲಿ ವನಜಾ ಗಿರೀಶ ಅವರ ಮನೆಯೂ ನಿರಂತರ ಮಳೆಯಿಂದ ಹಾನಿಗೊಳಗಾಗಿದ್ದು, ಗೋಡೆ ಹಾಗೂ ಮೇಲ್ಛಾವಣಿಗೆ ಹಾನಿ ಸಂಭವಿಸಿದೆ ಎನ್ನಲಾಗಿದೆ.
ಮಳೆ ಇನ್ನೂ ಮುಂದುವರಿಯುತ್ತಿರುವ ಹಿನ್ನೆಲೆ, ಅಪಾಯದ ಪ್ರದೇಶಗಳಲ್ಲಿ ವಾಸಿಸುವ ಸಾರ್ವಜನಿಕರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ. ಹಾನಿಗೊಳಗಾದ ಮನೆಗಳ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸುವ ಪ್ರಕ್ರಿಯೆ ಆರಂಭವಾಗಿದೆ.


