ಡಾ. ವಿ.ಎಸ್ ಆಚಾರ್ಯ ಸಭಾಂಗಣ ದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಯು.ಟಿ ಖಾದರ್ ಫರೀದ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 04-07-2026 ರಂದು ನಡೆದ “ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ”ಯಲ್ಲಿ ಕಾಪು ವಿಧಾನಸಭಾ ಕ್ಷೇತ್ರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು.

ಕಾಪು ವಿಧಾನಸಭಾ ಕ್ಷೇತ್ರದ ಬಹುತೇಕ ಪ್ರದೇಶವು ಕರಾವಳಿ ತೀರಕ್ಕೆ ಹೊಂದಿಕೊಂಡಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಕಡಲ್ಗೊರೆತಗಳು ವಿಪರೀತವಾಗಿದ್ದು, ಹೆಜಮಾಡಿ, ನಡಿಪಟ್ಟ, ಕಾಡಿಪಟ್ಟಿ, ಮೂಳೂರು, ತೊಟ್ಟಂ, ಲೈಟ್ ಹೌಸ್ ಮುಂತಾದ ಕಡೆಗಳಲ್ಲಿ ಸಂಭಾವ್ಯತೆಯ ಅವಘಡವನ್ನು ತಪ್ಪಿಸಲು ಸಮುದ್ರ ಕೊರೆತ ಪ್ರತಿಬಂಧಕ ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ನಿರ್ಮಿಸಲು ತುರ್ತು ಅನುದಾನ ಮಂಜೂರು ಮಾಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸುವಂತೆ, ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ನಾದುರಸ್ಥಿಯಲ್ಲಿದ್ದು, ಜನ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ಅನುದಾನ ಮಂಜೂರು ಮಾಡುವಂತೆ, ಬಿ.ಪಿ.ಎಲ್ ಪಡಿತರ ಚೀಟಿ (ವೈದ್ಯಕೀಯ ಪ್ರಕರಣಗಳಲ್ಲಿ ತೀವ್ರ ತರಹದ ಖಾಯಿಲೆಯ ಪ್ರಕರಣದಲ್ಲಿ) ಸಾರ್ವಜನಿಕರಿಗೆ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಆದ್ಯತೆಯ ನೆಲೆಯಲ್ಲಿ ನೀಡಲಾಗುತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಕಳೆದ 1 ತಿಂಗಳಿನಿಂದ ದಿನಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೆಶಕರ ಹುದ್ದೆ ತೆರವಾಗಿದ್ದು, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಸಕಾಲದಲ್ಲಿ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಒದಗಿಸಲು ಕಷ್ಟಸಾಧ್ಯವಾಗುತ್ತಿದ್ದು, ವೈದ್ಯಕೀಯ ಪ್ರಕರಣದಲ್ಲಿ ಬಿ.ಪಿ.ಎಲ್ ಪಡಿತರ ಚೀಟಿಯನ್ನು ಅನುಮೋದಿಸಲು ಸಂಬಂಧಪಟ್ಟ ಪ್ರಾಧಿಕಾರ ಕ್ರಮವಹಿಸುವಂತೆ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮುದರಂಗಡಿ ಇಲ್ಲಿ ಮೇಲ್ದಾವಣಿ ಹಾಗೂ ಇನ್ನಿತರ ಮೂಲಭೂತ ಸೌಕರ್ಯವನ್ನು ಒದಗಿಸಲು ಅನುದಾನ ಮಂಜೂರು ಮಾಡುವಂತೆ, ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕೊಠಡಿ ದುರಸ್ಥಿಗಳನ್ನು ತುರ್ತು ನಿಧಿಯಲ್ಲಿ ನಿರ್ವಹಿಸುವ ಬಗ್ಗೆ ಪ್ರಾಕೃತಿಕ ವಿಕೋಪದ ಅನುದಾನದಡಿಯಲ್ಲಿ ಅನುದಾನ ನೀಡುವಂತೆ ಸಚಿವರಿಗೆ ಶಾಸಕರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ.ಎ ಗಫೂರ್, ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರತೀಕ್ ಬಾಯಲ್, ಪೋಲಿಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

