ಮೂಡುಬಿದಿರೆ : ಜು.12ರಂದು ಮನೆಯಿಂದ ನಾಪತ್ತೆಯಾಗಿದ್ದ ವಾಲ್ಪಾಡಿ ಗ್ರಾ. ಪಂಚಾಯತ್ ನ ವಾಲ್ಪಾಡಿ ಜೋಗೊಟ್ಟು ನಿವಾಸಿ ಭೋಜ ಪೂಜಾರಿ ( 55ವ) ಅವರ ಮೃತದೇಹವು ಹನ್ನೆರಡು ಕವಲಿನ ನದಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಭೋಜ ಪೂಜಾರಿ ಅವರು ಅಳಿಯೂರಿನಲ್ಲಿರುವ ತನ್ನ ಬಾವ ಲಕ್ಷ್ಮಣ್ ಪೂಜಾರಿ ಅವರ ಮನೆಯಲ್ಲಿರುತ್ತಿದ್ದರು. ಶನಿವಾರದಂದು ಮರೋಡಿಯಲ್ಲಿರುವ ತನ್ನ ಸಹೋದರಿಯ ಮನೆಗೆ ತೆರಳಿದ್ದರು. ಅಲ್ಲಿಂದ ಭಾನುವಾರ ಬೆಳಿಗ್ಗೆ ತನ್ನ ದ್ವಿಚಕ್ರ ವಾಹನ ಲೂನಾದಲ್ಲಿ ತೆರಳಿದ್ದು ಬಳಿಕ ಯಾರ ಮನೆಗೂ ಮರಳದೆ ನಾಪತ್ತೆಯಾಗಿದ್ದರು . ಈ ಬಗ್ಗೆ ಹುಡುಕಾಟ ಆರಂಭಿಸಿದ್ದು ಸೋಮವಾರ ಬೆಳಿಗ್ಗೆ ಹನ್ನೆರಡು ಕವಲು ಪ್ರದೇಶದ ನದಿಯಲ್ಲಿ ಭೋಜ ಪೂಜಾರಿ ಅವರ ಮೃತದೇಹ ಪತ್ತೆಯಾಗಿದೆ.
ಭೋಜ ಅವರು ಅವಿವಾಹಿತರಾಗಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.


