ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರನ್ನು ತೀವ್ರವಾಗಿ ಕಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸ ಬೇಕು ಹಾಗೂ ತೋಟಗಾರಿಕಾ ಮಿಷನ್ (ಎಂಐಡಿಎಚ್) ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂದು ದ.ಕ. ಸಂಸದ ಬ್ರಿಜೇಶ್ ಚೌಟ ಸೋಮವಾರ ಲೋಕಸಭೆಯಲ್ಲಿ ನಿಯಮ 377ರಡಿ ಒತ್ತಾಯಿಸಿದ್ದಾರೆ.
ಸದನದಲ್ಲಿ ಈ ಗಂಭೀರ ವಿಷಯವನ್ನು ಪ್ರಸ್ತಾಪಿಸಿದ ಸಂಸದರು, ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ತೋಟಗಳು ಪುನರಾವರ್ತಿತವಾಗಿ ಬರುವ ವಿವಿಧ ರೋಗಗಳಿಂದ ತೀವ್ರವಾಗಿ ಹಾನಿಗೊಳಗಾಗುತ್ತಿವೆ. ಈ ರೋಗ ಗಳ ನಿವಾರಣೆಗೆ ರೋಗ ನಿರ್ಣಯ, ತೋಟದ ನೈರ್ಮಲ್ಯ, ಪೋಷಕಾಂಶಗಳ ಪೂರೈಕೆ, ಸೂಕ್ತ ಡ್ರೈನೇಜ್ ವ್ಯವಸ್ಥೆ, ನಿರಂತರ ಮೇಲ್ವಿಚಾರಣೆ ಹಾಗೂ ವ್ಯಾಪಕವಾಗಿ ಬಾಧಿತಗೊಂಡ ತೋಟಗಳಲ್ಲಿ ರೀಪ್ಲಾಂಟೇಷನ್ ಮಾಡುವಂತಹ ಪೂರ್ಣ ಪ್ರಮಾಣದ ವೈಜ್ಞಾನಿಕ ನಿಯಂತ್ರಣ ಅಥವಾ ಚಿಕಿತ್ಸಾ ಕ್ರಮಗಳ ಅಗತ್ಯವಿದೆ. ಸದ್ಯ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ಮೆಂಟ್ ಆಫ್ ಹಾರ್ಟಿಕಲ್ಚರ್’ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು 60:40 ಅನುಪಾತದ ಪಾಲುದಾರಿಕೆಯಲ್ಲಿ ನೀಡುತ್ತಿರುವ ಆರ್ಥಿಕ ನೆರವು ನಿಗದಿತ ಘಟಕ ವೆಚ್ಚಗಳನ್ನು ಆಧರಿಸಿದೆ. ಆದರೆ ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುವ ರೋಗ ಬಾಧೆಯ ತೀವ್ರತೆ ಹಾಗೂ ವೈಜ್ಞಾನಿಕ ಚಿಕಿತ್ಸೆಗೆ ತಗುಲುವ ಸಂಪೂರ್ಣ ವೆಚ್ಚವನ್ನು ಭರಿಸಲು ಸಾಕಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

