ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಅಮೆರಿಕದ ಇಲಿನಾಯ್ಸ್ ರಾಜ್ಯದ ನೇಪರ್ವಿಲ್ಲೆಯ ಯೆಲ್ಲೋ ಬಾಕ್ಸ್ ಸಭಾಂಗಣದಲ್ಲಿ ಜು. 25ರಂದು ಅಮೆರಿಕನ್ ಮಲ್ಟಿ ಎಥ್ನಿಕ್ ಕಮಿಷನ್ (AMEC)ಯ 15ನೇ ವಾರ್ಷಿಕ ಕಾಂಗ್ರೆಷನಲ್ ಗ್ಲೋಬಲ್ ಚಾಂಪಿಯನ್ಸ್ ಗಾಲಾ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಸಾರ್ವಜನಿಕ ಸೇವೆಯಲ್ಲಿ ಹಲವು ದಶಕಗಳಿಂದ ಸಲ್ಲಿಸಿರುವ ಸೇವೆ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ನಾಯಕತ್ವ, ಸಮಗ್ರ ಆಡಳಿತ ಹಾಗೂ ಸಮುದಾಯ-ಕೇಂದ್ರಿತ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಯು.ಟಿ. ಖಾದರ್ ಅವರನ್ನು AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು AMEC ಸಂಸ್ಥಾಪಕ ಅಧ್ಯಕ್ಷ ಹಾಗೂ ಜಾಗತಿಕ ಕಾರ್ಯತಂತ್ರದ ಒಕ್ಕೂಟದ ಅಧ್ಯಕ್ಷ ಡಾ. ವಿಜಯ್ ಜಿ. ಪ್ರಭಾಕರ್ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದರ ಜೊತೆಗೆ ಆರೋಗ್ಯ, ಪೌಷ್ಟಿಕಾಂಶ, ಆಹಾರ ವಿಜ್ಞಾನ ಹಾಗೂ ವೈದ್ಯಕೀಯ ಸಂಶೋಧನಾ ಕ್ಷೇತ್ರಗಳಲ್ಲಿ ಭಾರತ–ಅಮೆರಿಕ ಸಹಕಾರ ಬಲಪಡಿಸುವ ಉದ್ದೇಶದಿಂದ ಖಾದರ್ ಅಮೆರಿಕದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈ 24ರಂದು ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನಡೆಯಲಿರುವ ‘ಆರೋಗ್ಯಕರ, ಸುಸ್ಥಿರ ಹಾಗೂ ಆಹಾರ ಸುರಕ್ಷಿತ ಭವಿಷ್ಯಕ್ಕಾಗಿ ಭಾರತ–ಅಮೆರಿಕ ರಾಗಿ ಪಾಲುದಾರಿಕೆ’ ವಿಷಯದ ದುಂಡುಮೇಜಿನ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.

