ಉಡುಪಿ: ಶ್ರೀ ಮಧ್ಯ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, ಬಂಟಕಲ್‌ನ ರಾಷ್ಟ್ರೀಯ ವಿದ್ಯಾರ್ಥಿ ದಳ (ಎನ್‌ಸಿಸಿ) ಘಟಕದ ವತಿಯಿಂದ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ತ್ಯಾಗ ಹಾಗೂ ದೇಶಭಕ್ತಿಯನ್ನು ಸ್ಮರಿಸುವ ಕಾರ್ಗಿಲ್ ವಿಜಯ್ ದಿವಸ್ ಅನ್ನು ಜುಲೈ 25ರಂದು ದೇಶಭಕ್ತಿಯ ಸಂಭ್ರಮದಲ್ಲಿ ಆಚರಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕ ನುಬೇದಾರ್ ರವೀಂದ್ರ ಕಾಮತ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಕಾರ್ಗಿಲ್ ಯುದ್ಧದ ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಭಾರತೀಯ ಸಶಸ್ತ್ರ ಪಡೆಗಳ ಧೈರ್ಯ, ದೃಢತೆ ಮತ್ತು ತ್ಯಾಗವನ್ನು ಸ್ಮರಿಸಿದ ಅವರು, ವಿಶೇಷವಾಗಿ ಎನ್‌ಸಿಸಿ ಕೆಡೆಟ್‌ಗಳು ಸೇರಿದಂತೆ ಯುವಜನರು ಸೇನೆಗೆ ಸೇರಿ ದೇಶಸೇವೆಯಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.


ಈ ಸಂದರ್ಭದಲ್ಲಿ ದೇಶಕ್ಕೆ ಸಲ್ಲಿಸಿದ ನಿಷ್ಠಾವಂತ ಸೇವೆ ಹಾಗೂ ಕಾರ್ಗಿಲ್ ಯುದ್ಧದಲ್ಲಿ ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸಿ ನುಬೇದಾರ್ ರವೀಂದ್ರ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಶೈಕ್ಷಣಿಕ ಮುಖ್ಯಸ್ಥ ಡಾ. ಸುದರ್ಶನ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ವೃಂದ, ಎನ್‌ಸಿಸಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

