ಗ್ಲಾಸ್ಗೊ: ಭಾರತದ ಉದಯೋನ್ಮುಖ ಅಥ್ಲಿಟ್ ಗುಲ್ವೀರ್ ಸಿಂಗ್ ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಪುರುಷರ 10ಕೆ ಓಟದ ಫೈನಲ್ನಲ್ಲಿ ಐತಿಹಾಸಿಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಸ್ಕಾಟ್ಸ್ಟೌನ್ ಕ್ರೀಡಾಂಗಣದಲ್ಲಿ ಸುರಿಯುತ್ತಿದ್ದ ಭಾರಿ ಮಳೆ ಮತ್ತು ನೀರು ತುಂಬಿದ ಟ್ರ್ಯಾಕ್ನಂತಹ ಸವಾಲಿನ ಪರಿಸ್ಥಿತಿಯಲ್ಲೂ ಛಲ ಬಿಡದೆ ಓಡಿದ ಗುಲ್ವೀರ್, ಕೊನೆಯವರೆಗೂ ಮುಂಚೂಣಿಯಲ್ಲೇ ಉಳಿದು ಸಹ ಆಟಗಾರರಿಗೆ ಪ್ರಬಲ ಪೈಪೋಟಿ ನೀಡಿದ್ದಾರೆ. ಗುಲ್ವೀರ್ 27 ನಿಮಿಷ 49.78 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. 27 ನಿಮಿಷ 48.93 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಆಸ್ಟ್ರೇಲಿಯಾದ ಕೈ ರಾಬಿನ್ಸನ್ ಚಿನ್ನದ ಪದಕ ಗೆದ್ದು ಬೀಗಿದರು. ಇತ್ತ, ಡೇವಿಡ್ ಮುಲ್ಲಾರ್ಕಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಭಾರತದ ಹರ್ಜಿಂದರ್ ಕೌರ್ ಅವರು ಮಹಿಳೆಯರ 69 ಕೆ.ಜಿ. ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.2022ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ನ 71 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ 29 ವರ್ಷದ ಹರ್ಜಿಂದರ್, ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಏಳನೇ ಪದಕ ತಂದುಕೊಟ್ಟಿದ್ದಾರೆ.ಕೆನಡಾದ ಶಾರ್ಲೆಟ್ ಸಿಮೋನ್ಯು ಚಿನ್ನ ಗೆದ್ದರು.


