ಪುತ್ತೂರು: ರಸ್ತೆ ದುರಸ್ತಿಗೆ ಆಗ್ರಹಿಸಿ ಪುತ್ತಿಲ ಪರಿವಾರದ ನೇತೃತ್ವದಲ್ಲಿ ಜು.27ರಂದು ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿತ್ತು.ಪೂರ್ವಾನುಮತಿ ಪಡೆಯದೆ ರಸ್ತೆ ತಡೆದು ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನರಿಮೊಗರು ಗ್ರಾಮದ ಪುರುಷರಕಟ್ಟೆ-ಶಾಂತಿಗೋಡು ಆನಡ್ಕ ಮಾರ್ಗದ ಮಾಯಂಗಳ ಎಂಬಲ್ಲಿ ಆರೋಪಿಗಳು ಗುಂಪು ಸೇರಿ ರಸ್ತೆ ತಡೆದು ವಾಹನ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಉಪನಿರೀಕ್ಷಕ ಸುರೇಶ್ ಸಿ.ಟಿ. ಅವರಿಗೆ ಮಾಹಿತಿ ಲಭಿಸಿತ್ತು.
ಮಾಹಿತಿ ಆಧಾರಿಸಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸ್ಥಳದಲ್ಲಿ ಅರುಣ್ ಕುಮಾರ್ ಪುತ್ತಿಲ, ಮನೀಶ್ ಕುಲಾಲ್, ಅವಿನಾಶ್ ಜೋಗಿ, ಪ್ರೇಮರಾಜ್, ಪ್ರತೀಕ್ ಪುತ್ತಿಲ, ಶ್ರೀರಾಮ್ ಪಾತಾಳ, ಉಮೇಶ್ ಕೊಡಿಬೈಲು, ಅನಿಲ್ ತೆಂಕಿಲ, ರವಿಕುಮಾರ್ ರೈ, ಜಗದೀಶ್ ರೈ, ಪ್ರಶಾಂತ ನೆಕ್ಕಿಲಾಡಿ ಹಾಗೂ ಇತರರು ಸೇರಿದಂತೆ ಸುಮಾರು 25 ರಿಂದ 30 ಜನರು ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಧರಣಿ ನಡೆಸುವುದು ಕಂಡುಬಂದಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.


