ಕಾಮನ್‌ವೆಲ್ತ್ ಗೇಮ್ಸ್ ಜೂಡೋ ಇತಿಹಾಸದಲ್ಲಿ ಭಾರತ ಶುಕ್ರವಾರ ರಾತ್ರಿ ಅವಳಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ವನಿತೆಯರ 48 ಕೆಜಿ ವಿಭಾಗದಲ್ಲಿ ಅಸ್ಮಿತಾ ಡೇ, ಪುರುಷರ 60 ಕೆಜಿ ವಿಭಾಗದಲ್ಲಿ ಹರ್ಷ್ ಸಿಂಗ್ ಈ ಸಾಧನೆಗೈದರು.
ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ1990ರಲ್ಲಿ ಮೊದಲ ಸಲ ಜೂಡೋವನ್ನು ಸೇರ್ಪಡೆಗೊಳಿಸಿದ ಬಳಿಕ ಭಾರತ ಎಲ್ಲ ಆವೃತ್ತಿಗಳಲ್ಲೂ ಪದಕ ಗೆಲ್ಲುತ್ತ ಬಂದಿತ್ತು. ಆದರೆ ಚಿನ್ನದ ಪದಕ ಜಯಿಸಿದ್ದು ಇದೇ ಮೊದಲು.ಮೂಲತಃ ತ್ರಿಪುರಾದವರಾದ, 23 ವರ್ಷದ ಅಸ್ಮಿತಾ ಡೇ ಕೆನಡಾದ ಹೈಡಿ ಕ್ಯುವಾಕ್ ಅವರನ್ನು ಮಣಿಸಿದರು. ಸ್ವಲ್ಪವೇ ಹೊತ್ತಿನಲ್ಲಿ ಹರ್ಷ್ ಸಿಂಗ್ ಮತ್ತೂಂದು ಚಿನ್ನದ ಮೂಲಕ ಹರ್ಷ ಉಕ್ಕಿಸಿದರು.
ಮೊದಲ ಸಲ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಸ್ಪರ್ಧೆಗೆ ಇಳಿದಿದ್ದ 23 ವರ್ಷದ ಹರ್ಷ್ ಸಿಂಗ್ ಆಸ್ಟ್ರೇಲಿಯದ ಅನುಭವಿ ಜೂಡೋಪಟು ಹಾಗೂ ಒಲಿಂಪಿಯನ್ ಕೂಡ ಆಗಿರುವ ಜೋಶುವ ಕಾಟ್ಜ್ ವಿರುದ್ಧ 10-0 ಅಂತರದಿಂದ ಗೆದ್ದು ಬಂದರು. ಕಾಟ್ಜ್ ಕಳೆದ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.ಕಾಟ್ಜ್ ಅವರ ತಂದೆ ತಾಯಿ ಕೂಡ ಜೂಡೋಪಟುಗಳಾಗಿದ್ದರು. ಕಳೆದ ಒಲಿಂಪಿಕ್ಸ್ ವೇಳೆ ಇವರ ತಂದೆ ಆಸ್ಟ್ರೇಲಿಯ ತಂಡದ ಜೂಡೋ ಕೋಚ್ ಆಗಿದ್ದರೆಂಬುದು ಉಲ್ಲೇಖನೀಯ. ಹೀಗಾಗಿ ಹರ್ಷ್ ಸಿಂಗ್ ಪಾಲಿಗೆ ಇದೊಂದು ಅವಿಸ್ಮರಣೀಯ ಹಾಗೂ ಮಹೋನ್ನತ ಸಾಧನೆ ಆಗಿದೆ.


