HomeFresh Newsಕಾಪು ಕ್ಷೇತ್ರದ ಅಭಿವೃದ್ಧಿಗೆ ವಿಧಾನಸಭೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮಹತ್ವದ ಪ್ರಶ್ನೆಗಳು

ಕಾಪು ಕ್ಷೇತ್ರದ ಅಭಿವೃದ್ಧಿಗೆ ವಿಧಾನಸಭೆಯಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮಹತ್ವದ ಪ್ರಶ್ನೆಗಳು

ಕಾಪು: ಕಾಪು ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ವಿಧಾನಸಭೆಯಲ್ಲಿ ಸರಕಾರದ ಗಮನ ಸೆಳೆದಿದ್ದಾರೆ. ಭೂ ನ್ಯಾಯ ಮಂಡಳಿ, ಬಗರ್‌ಹುಕುಂ ಪ್ರಕರಣಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಹಾಗೂ ಹೆಜಮಾಡಿ ಅಗ್ನಿಶಾಮಕ ಠಾಣೆಗೆ ಸಂಬಂಧಿಸಿದಂತೆ ಅವರು ಪ್ರಶ್ನೆಗಳನ್ನು ಕೇಳಿದ್ದು, ಸರಕಾರದಿಂದ ಮಹತ್ವದ ಉತ್ತರಗಳು ದೊರೆತಿವೆ.
200ಕ್ಕೂ ಹೆಚ್ಚು ಭೂ ನ್ಯಾಯ ಮಂಡಳಿ ಪ್ರಕರಣಗಳು ಬಾಕಿ
ಕಾಪು ತಾಲೂಕಿನ ಭೂ ನ್ಯಾಯ ಮಂಡಳಿಗಳಲ್ಲಿ 200ಕ್ಕೂ ಅಧಿಕ ಪ್ರಕರಣಗಳು ಬಾಕಿ ಇರುವ ಹಿನ್ನೆಲೆಯಲ್ಲಿ, ನಾಲ್ಕು ತಿಂಗಳಿನಿಂದ ಸಹಾಯಕ ಆಯುಕ್ತರ ನೇಮಕವಾಗದೇ ವಿಚಾರಣೆಗಳು ವಿಳಂಬವಾಗುತ್ತಿರುವ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು, ಸಮಸ್ಯೆ ಸರಕಾರದ ಗಮನಕ್ಕೆ ಬಂದಿದ್ದು, 2025ರ ಸೆಪ್ಟೆಂಬರ್ 4ರಂದು ಹೊರಡಿಸಲಾದ ಅಧಿಸೂಚನೆಯಂತೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಕಾಪು ತಾಲೂಕು ಭೂ ನ್ಯಾಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ದೀರ್ಘಕಾಲ ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಅಗತ್ಯ ಕಂಡುಬಂದಲ್ಲಿ ಹೆಚ್ಚುವರಿ ನ್ಯಾಯಾಧಿಕರಣ ರಚಿಸುವ ಅವಕಾಶ ಸರಕಾರಕ್ಕಿದೆ. ಅಗತ್ಯವಿದ್ದಲ್ಲಿ ಇತರೆ ತಾಲೂಕುಗಳ ನ್ಯಾಯಾಧಿಕರಣಗಳಿಗೆ ಪ್ರಕರಣಗಳ ಕೆಲಸವನ್ನು ಹಂಚಿಕೆ ಮಾಡಲು ಕೂಡ ಅವಕಾಶವಿದೆ ಎಂದು ಸರಕಾರ ತಿಳಿಸಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ₹4.55 ಕೋಟಿ ಪ್ರಸ್ತಾವನೆ
ಕಾಪು ಕ್ಷೇತ್ರದ ಪ್ರವಾಸೋದ್ಯಮ, ಕೈಗಾರಿಕೆ ಹಾಗೂ ಶೈಕ್ಷಣಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಕುರಿತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಲೋಕೋಪಯೋಗಿ ಸಚಿವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, 2026-27ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ-5, ಘಟ್ಟ-2ರಲ್ಲಿ ಎರಡು ಪ್ರಮುಖ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕಟಪಾಡಿ (ಎನ್‌ಎಚ್-66)–ಅಬ್ಬಕ್ಕ ಸರ್ಕಲ್ (ಉಳ್ಳಾಲ ಸಮೀಪ) ರಾಜ್ಯ ಹೆದ್ದಾರಿ-300 ಅಭಿವೃದ್ಧಿಗೆ ₹2.05 ಕೋಟಿ.
ಮಂಗಳೂರು–ಆತ್ರಾಡಿ ರಾಜ್ಯ ಹೆದ್ದಾರಿ-67 ಅಭಿವೃದ್ಧಿಗೆ ₹2.50 ಕೋಟಿ.
ಒಟ್ಟು ₹4.55 ಕೋಟಿ ಅಂದಾಜು ಮೊತ್ತದ ಕಾಮಗಾರಿಗಳಿಗೆ ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ಬಳಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಉತ್ತರಿಸಿದ್ದಾರೆ.

ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಬಗರ್‌ಹುಕುಂ ಸಮಿತಿಯ ಮೂಲಕ ನಮೂನೆ 53 ಮತ್ತು 57ರಡಿ ಮಂಡಿಸಲಾದ ಕಡತಗಳು ಹಾಗೂ ಖಾಯಂ ಮಂಜೂರಾತಿ ಕುರಿತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರಶ್ನಿಸಿದರು.
ಸರಕಾರದ ಉತ್ತರದ ಪ್ರಕಾರ, ಉಡುಪಿ ತಾಲೂಕಿನಲ್ಲಿ ನಮೂನೆ 53ರಡಿ 32 ಹಾಗೂ ನಮೂನೆ 57ರಡಿ 16 ಫಲಾನುಭವಿಗಳ ಕಡತಗಳು, ಕಾಪು ತಾಲೂಕಿನಲ್ಲಿ ನಮೂನೆ 53ರಡಿ 8 ಹಾಗೂ ನಮೂನೆ 57ರಡಿ 11 ಕಡತಗಳು ಮಂಡನೆಯಾಗಿವೆ.
ಇವುಗಳಲ್ಲಿ 12 ಫಲಾನುಭವಿಗಳ ಕಡತಗಳಿಗೆ ಖಾಯಂ ಮಂಜೂರಾತಿ ನೀಡಲಾಗಿದೆ ಎಂದು ಸರಕಾರ ತಿಳಿಸಿದೆ.
ಭೂಮಿ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ದೂರು ದಾಖಲಿಸಿ ಪರಿಹರಿಸಲು Complaint Registration Monitoring & Resolution System (CRMRS) ವ್ಯವಸ್ಥೆ ಕಲ್ಪಿಸಲಾಗಿದೆ. ಈ ವ್ಯವಸ್ಥೆಯಲ್ಲಿ ಸಮಸ್ಯೆ ದಾಖಲಿಸಿದ ಬಳಿಕ ಭೂಮಿ ಸಮಾಲೋಚಕರ ಮೂಲಕ ತಾಂತ್ರಿಕ ಸಮಸ್ಯೆ ಪರಿಹರಿಸಲಾಗುವುದು ಎಂದು ಸರಕಾರ ತಿಳಿಸಿದೆ.

ಕಾಪು ತಾಲೂಕಿನ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಅಗ್ನಿಶಾಮಕ ಠಾಣೆಯ ಕಟ್ಟಡ ಕಾಮಗಾರಿ ಕುರಿತು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗೃಹ ಸಚಿವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಗೃಹ ಸಚಿವರು, ಪಡುಬಿದ್ರೆ ಸಮೀಪದ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಅಗ್ನಿಶಾಮಕ ಠಾಣೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡವನ್ನು ಇಲಾಖೆಯ ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಆದರೆ, ಠಾಣೆಗೆ ಇದುವರೆಗೆ ಹುದ್ದೆಗಳು ಮಂಜೂರಾಗಿಲ್ಲ. ಪಡುಬಿದ್ರೆ ಅಗ್ನಿಶಾಮಕ ಠಾಣೆ ಸೇರಿದಂತೆ 26 ನೂತನ ಅಗ್ನಿಶಾಮಕ ಠಾಣೆಗಳಿಗೆ ಹುದ್ದೆ ಮಂಜೂರಾತಿಗಾಗಿ 2026ರ ಜೂನ್ 22ರಂದು ಪ್ರಸ್ತಾವನೆ ಸ್ವೀಕೃತವಾಗಿದ್ದು, ಆರ್ಥಿಕ ಇಲಾಖೆಯ ಸಹಮತಕ್ಕಾಗಿ ಕಡತ ಸಲ್ಲಿಸಲಾಗಿದೆ.
ಅಗ್ನಿಶಾಮಕ ಠಾಣೆ ಆರಂಭಗೊಂಡ ಸಂದರ್ಭದಲ್ಲಿ ಇಲಾಖೆಯಲ್ಲಿ ಲಭ್ಯವಿರುವ ವಾಹನವನ್ನು ಠಾಣೆಗೆ ಹಂಚಿಕೆ ಮಾಡಲಾಗುವುದು ಎಂದು ಗೃಹ ಸಚಿವರು ಉತ್ತರಿಸಿದ್ದಾರೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments