ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ಹೆಮ್ಮೆಯ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಪ್ರಸಾರವಾಗುತ್ತಿದ್ದಾಗ ಅದಕ್ಕೆ ಗೌರವ ನೀಡದೆ ಅರ್ಧಕ್ಕೆ ನಿಲ್ಲಿಸಲು ಸನ್ನೆ ಮಾಡಿದ ಕಾಂಗ್ರೆಸ್ ನಾಯಕರ ನಡೆ ದೇಶಪ್ರೇಮಿಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಗಜೇಂದ್ರ ಎಸ್. ಬೇಲೆಮನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಲಕ್ಷಾಂತರ ಕ್ರಾಂತಿಕಾರಿಗಳಿಗೆ ಸ್ಫೂರ್ತಿಯಾಗಿದ್ದ ‘ವಂದೇ ಮಾತರಂ’ ಗೀತೆಯನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಗೀತೆ ಮೊಳಗುತ್ತಿದ್ದಾಗ ಗಂಭೀರವಾಗಿ ನಿಲ್ಲಬೇಕಾದ ನಾಯಕರು ಪರಸ್ಪರ ಮಾತನಾಡುತ್ತಾ, ಗಾಯನವನ್ನು ಅರ್ಧಕ್ಕೇ ನಿಲ್ಲಿಸುವಂತೆ ಕೈಸನ್ನೆ ಮಾಡಿರುವುದು ದೇಶದ ರಾಷ್ಟ್ರೀಯ ಸಂಕೇತಗಳಿಗೆ ಬಗೆದ ಅಪಚಾರವಾಗಿದೆ” ಎಂದು ಆಪಾದಿಸಿದ್ದಾರೆ.
ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಯ ಅಡಿಯಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಗೆ ಧಕ್ಕೆ ತರುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ವಂದೇ ಮಾತರಂಗೆ ಅಗೌರವ ತೋರಿದ ಇಬ್ಬರೂ ನಾಯಕರ ವಿರುದ್ಧ ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರ ಬಲಿದಾನವನ್ನು ಮತ್ತು ದೇಶದ 140 ಕೋಟಿ ಜನರ ಭಾವನೆಗಳನ್ನು ಹತ್ತಿಕ್ಕಲು ಯತ್ನಿಸಿದ ಕಾಂಗ್ರೆಸ್ ನಾಯಕರು ತಕ್ಷಣವೇ ದೇಶದ ಜನರ ಬೇಷರತ್ ಕ್ಷಮೆಯಾಚಿಸಬೇಕು. ದೇಶಪ್ರೇಮದ ವಿಚಾರದಲ್ಲಿ ಯುವಮೋರ್ಚಾ ಎಂದಿಗೂ ರಾಜಿಯಾಗುವುದಿಲ್ಲ. ಈ ಘಟನೆಯನ್ನು ವಿರೋಧಿಸಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಗಜೇಂದ್ರ ಎಸ್. ಬೇಲೆಮನೆ ಎಚ್ಚರಿಸಿದ್ದಾರೆ.

