HomeFresh Newsನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಅ.9ರಂದು ಕುಂತಳನಗರದಲ್ಲಿ 5ನೇ ಬೃಹತ್ ಉದ್ಯೋಗ ಮೇಳ

ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಅ.9ರಂದು ಕುಂತಳನಗರದಲ್ಲಿ 5ನೇ ಬೃಹತ್ ಉದ್ಯೋಗ ಮೇಳ

ಉಡುಪಿ: ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಹಾಗೂ ಎಂ.ಆರ್.ಜಿ. ಗ್ರೂಪ್‌ನ ಪ್ರಾಯೋಜಕತ್ವದಲ್ಲಿ 5ನೇ ಬೃಹತ್ ಉದ್ಯೋಗ ಮೇಳವನ್ನು ಅಕ್ಟೋಬರ್ 9, 2026ರಂದು ಕುಂತಳನಗರದಲ್ಲಿ ಆಯೋಜಿಸಲಾಗಿದೆ.
ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಹಾಗೂ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ.
ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಅವರ ಕೌಶಲ್ಯ ಮತ್ತು ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಕಂಪನಿಗಳೊಂದಿಗೆ ನೇರ ಸಂಪರ್ಕ ಕಲ್ಪಿಸುವುದು ಹಾಗೂ ಗ್ರಾಮೀಣ ಭಾಗದ ಪ್ರತಿಭಾವಂತ ಯುವಕ-ಯುವತಿಯರಿಗೆ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಲು ವೇದಿಕೆ ಒದಗಿಸುವುದು ಉದ್ಯೋಗ ಮೇಳದ ಪ್ರಮುಖ ಉದ್ದೇಶವಾಗಿದೆ.
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ನಾಲ್ಕು ಬೃಹತ್ ಉದ್ಯೋಗ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಈ ಮೇಳಗಳ ಮೂಲಕ ಈವರೆಗೆ 3,500ಕ್ಕೂ ಹೆಚ್ಚು ಯುವಕ-ಯುವತಿಯರು ಉದ್ಯೋಗ ಹಾಗೂ ಆಯ್ಕೆ/ಶಾರ್ಟ್‌ಲಿಸ್ಟ್ ಅವಕಾಶಗಳನ್ನು ಪಡೆದು ಪ್ರಯೋಜನ ಹೊಂದಿದ್ದಾರೆ. ಈ ಯಶಸ್ಸಿನ ಮುಂದುವರಿದ ಭಾಗವಾಗಿ ಈ ಬಾರಿ ಇನ್ನಷ್ಟು ವಿಸ್ತೃತವಾಗಿ 5ನೇ ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ.
50ಕ್ಕೂ ಹೆಚ್ಚು ಕಂಪನಿಗಳ ಭಾಗಿ
ಈ ಬಾರಿಯ ಉದ್ಯೋಗ ಮೇಳದಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿವೆ.
ಇಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ, ಐಟಿಐ, ಎಂಬಿಎ, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವೀಧರರು, ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಬಹುದು.
ಉದ್ಯೋಗಾಕಾಂಕ್ಷಿಗಳು ಒಂದೇ ವೇದಿಕೆಯಲ್ಲಿ ಹಲವು ಕಂಪನಿಗಳ ಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ, ತಮ್ಮ ವಿದ್ಯಾರ್ಹತೆ, ಅನುಭವ ಹಾಗೂ ಕೌಶಲ್ಯಕ್ಕೆ ಅನುಗುಣವಾದ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದು ಸಂದರ್ಶನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ವಿದೇಶಿ ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ
ಉದ್ಯೋಗ ಮೇಳದೊಂದಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ ವಿಶೇಷ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆಯನ್ನೂ ಮಾಡಲಾಗಿದೆ.
ವಿದೇಶಿ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿನಿಧಿಗಳು ಭಾಗವಹಿಸಿ, ವಿವಿಧ ಕೋರ್ಸ್‌ಗಳು, ವಿಶ್ವವಿದ್ಯಾಲಯಗಳ ಆಯ್ಕೆ, ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿವೇತನ, ಶಿಕ್ಷಣ ಸಾಲ, IELTS, TOEFL, PTE, GRE ಹಾಗೂ GMAT ಸೇರಿದಂತೆ ವಿವಿಧ ಪರೀಕ್ಷೆಗಳು ಮತ್ತು ವೀಸಾ ಪ್ರಕ್ರಿಯೆ ಕುರಿತು ಅಗತ್ಯ ಮಾಹಿತಿ ನೀಡಲಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಆನ್‌ಲೈನ್ ನೋಂದಣಿ
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಪ್ರಕಟಣೆಯೊಂದಿಗೆ ನೀಡಲಾಗಿರುವ QR Code ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಥವಾ ಆನ್‌ಲೈನ್ ನೋಂದಣಿ ಲಿಂಕ್ ಮೂಲಕ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಮತ್ತು ಟ್ರೈನಿಂಗ್ ವಿಭಾಗದ ಮುಖ್ಯಸ್ಥರಾದ ಭರತ್ ಕುಮಾರ್ ಹಾಗೂ ಅವರ ತಂಡದ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಈ ಬೃಹತ್ ಉದ್ಯೋಗ ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುತ್ತಿದೆ.
ಯುವಜನರಿಗೆ ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಉನ್ನತ ಶಿಕ್ಷಣದ ಅವಕಾಶಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ಆಯೋಜಿಸಿರುವ ಈ 5ನೇ ಬೃಹತ್ ಉದ್ಯೋಗ ಮೇಳವು ಜಿಲ್ಲೆಯ ಯುವಜನರಿಗೆ ಅತ್ಯಂತ ಪ್ರಯೋಜನಕಾರಿ ಕಾರ್ಯಕ್ರಮವಾಗಲಿದೆ ಎಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments