ಪಡುಬಿದ್ರಿ: ಪಡುಬಿದ್ರಿ ನಡ್ಸಾಲು ಗ್ರಾಮದ ಕಾಡಿಪಟ್ನ ಮೀನುಗಾರಿಕಾ ರಸ್ತೆ ಹಾಗೂ ಹದಗೆಟ್ಟಿರುವ ಕಿರಿದಾದ ಸೇತುವೆಯನ್ನು ನೂತನವಾಗಿ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗೆ ತುರ್ತು ಅನುದಾನ ಮಂಜೂರುಗೊಳಿಸುವಂತೆ ಮೀನುಗಾರಿಕೆ ಸಚಿವರಾದ ಮಾನ್ಯ ಶ್ರೀ ಕೆ. ಎಸ್. ಬಸವಂತಪ್ಪ ಅವರಿಗೆ ಕಾಡಿಪಟ್ನ ಮೊಗವೀರ ಮಹಾಸಭಾ (ರಿ.) ವತಿಯಿಂದ ಇಂದು ಮನವಿ ಸಲ್ಲಿಸಲಾಯಿತು.
ಕಾಡಿಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ್ ಸಾಲ್ಯಾನ್ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಕಾಡಿಪಟ್ನ ಮೀನುಗಾರಿಕಾ ರಸ್ತೆಯಲ್ಲಿರುವ ಹಳೆಯ ಸೇತುವೆ ಸಂಪೂರ್ಣ ಹದಗೆಟ್ಟಿದ್ದು, ಅತ್ಯಂತ ಕಿರಿದಾಗಿರುವ ಕಾರಣ ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರತಿನಿತ್ಯ ಅಪಾಯದ ನಡುವೆ ಸಂಚರಿಸುವಂತಾಗಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು.
ಕಾಡಿಪಟ್ನ ಪ್ರದೇಶದ ಸಾವಿರಾರು ಮೀನುಗಾರ ಕುಟುಂಬಗಳಿಗೆ ಈ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಮೀನುಗಾರರು ಹಾಗೂ ಪ್ರವಾಸಿಗರು ಪ್ರತಿದಿನ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಅಲ್ಲದೆ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿರುವುದರಿಂದ, ರಸ್ತೆ ಹಾಗೂ ಸೇತುವೆಯ ಅಭಿವೃದ್ಧಿ ಅತ್ಯಂತ ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಳೆಗಾಲದಲ್ಲಿ ಸೇತುವೆಯ ದುಸ್ಥಿತಿಯಿಂದ ಸಂಚಾರಕ್ಕೆ ಮತ್ತಷ್ಟು ತೊಂದರೆ ಉಂಟಾಗುತ್ತಿದ್ದು, ಯಾವುದೇ ಸಮಯದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವಂತೆ ಸಚಿವರಲ್ಲಿ ಮನವಿ ಮಾಡಲಾಯಿತು.
ಕಾಮಗಾರಿಗೆ ಸಂಬಂಧಿಸಿದ ನಕ್ಷೆ, ತಾಂತ್ರಿಕ ವರದಿ ಹಾಗೂ ಅಂದಾಜು ವೆಚ್ಚದ ವಿವರಗಳನ್ನು ಈಗಾಗಲೇ ಮೀನುಗಾರಿಕೆ ಇಲಾಖೆಗೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ಅಗತ್ಯ ಅನುದಾನ ಮಂಜೂರು ಮಾಡಿ, ಹಳೆಯ ಸೇತುವೆಯನ್ನು ತೆರವುಗೊಳಿಸಿ ಅಗಲವಾದ ಹಾಗೂ ಸುಸಜ್ಜಿತ ಹೊಸ ಸೇತುವೆ ನಿರ್ಮಾಣ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಮ್.ಎ ಗಪೂರ್ .ಗ್ರಾಮ ಪಂ.ಮಾಜಿ ಸದಸ್ಯರಾದ ನವೀನ್ ಎನ್ ಶೆಟ್ಟಿ , ಗಣೇಶ್ ಕೋಟ್ಯಾನ್ , ನವೀನ್ ಸಾಲ್ಯಾನ್ ಪೆರ್ಡೂರ್ ,. ಕಾಡಿಪಟ್ನ ಮೊಗವೀರ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ವಿಶ್ವಾಸ್ ಅಮೀನ್ ಉಪಸ್ಥಿತರಿದ್ದರು

