HomeFresh Newsಉಡುಪಿ:ವನಸುಮ ಜೇಸಿ ಸಪ್ತಾಹಕ್ಕೆ ತೆರೆ

ಉಡುಪಿ:ವನಸುಮ ಜೇಸಿ ಸಪ್ತಾಹಕ್ಕೆ ತೆರೆ

ಉಡುಪಿ: ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಹಾಗೂ ವನಸುಮ ವೇದಿಕೆಯ ಸಹಯೋಗದಲ್ಲಿ ಸೆಪ್ಟೆಂಬರ್ 9ರಿಂದ ನಡೆಯುತ್ತಿದ್ದ ವನಸುಮ ಜೇಸಿ ಸಪ್ತಾಹದ ಸಮಾರೋಪ ಸಮಾರಂಭ ಸೆಪ್ಟೆಂಬರ್ 15ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಿತು.
ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಸಮಾರೋಪ ನುಡಿಗಳನ್ನಾಡಿ, ಜೇಸಿಐಯಂತಹ ಸಂಸ್ಥೆಗಳ ಮೂಲಕ ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ವನಸುಮ ರಂಗ ಸಮ್ಮಾನ್ ಹಾಗೂ ರಂಗ ಪುರಸ್ಕಾರವನ್ನು ಪ್ರದಾನ ಮಾಡಿದರು. ವನಸುಮ ವೇದಿಕೆ ಹಾಗೂ ಟ್ರಸ್ಟ್‌ನ ನಿರಂತರ ರಂಗ ಬದ್ಧತೆಯನ್ನು ಅವರು ಶ್ಲಾಘಿಸಿದರು.
ಡೆಂಟಾ ಕೇರ್‌ನ ಡಾ. ವಿಜಯೇಂದ್ರ ವಸಂತ್, ಎಂಪೈರ್ ಎಂಟರ್‌ಟೈನ್‌ಮೆಂಟ್‌ನ ಜಯಕುಮಾರ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು.
ಜೇಸಿಐ ಉಡುಪಿ ಸಿಟಿಯ ಪೂರ್ವಾಧ್ಯಕ್ಷರು ಹಾಗೂ ವನಸುಮ ವೇದಿಕೆಯ ಹಿರಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜೇಸಿಐ ಅಧ್ಯಕ್ಷೆ ಪಲ್ಲವಿ ಕೊಡಗು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜೇಸಿ ಸಪ್ತಾಹ ನಿರ್ದೇಶಕ ಹಾಗೂ ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವನಸುಮ ವೇದಿಕೆ ಅಧ್ಯಕ್ಷ ವಿನಯ ಆಚಾರ್ಯ ಮುಂಡೂರು ಅವರ ನೇತೃತ್ವದಲ್ಲಿ ರಂಗ ಸಮ್ಮಾನ್ ಹಾಗೂ ರಂಗ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಘಟಕದ ಕಾರ್ಯದರ್ಶಿ ಸಮಿಯಾ ಹೆಗ್ಡೆ ವಂದನಾರ್ಪಣೆ ಸಲ್ಲಿಸಿದರು.

ಸೆಪ್ಟೆಂಬರ್ 9ರಿಂದ 15ರವರೆಗೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ವನಸುಮ ಜೇಸಿ ಸಪ್ತಾಹದ ಸಮಾರೋಪದಲ್ಲಿ ಖ್ಯಾತ ರಂಗನಟ ಎಂ. ಎಸ್. ಭಟ್ ಅವರಿಗೆ ವನಸುಮ ರಂಗ ಸಮ್ಮಾನ್ ಪ್ರಶಸ್ತಿ ಹಾಗೂ ಯುವ ರಂಗ ನಿರ್ದೇಶಕ ರೋಹಿತ್ ಬೈಕಾಡಿ ಅವರಿಗೆ ವನಸುಮ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.
ರಂಗಭೂಮಿಯಲ್ಲಿ ಸಲ್ಲಿಸಿದ ಸಾಧನೆ ಹಾಗೂ ನಿರಂತರ ಬದ್ಧತೆಯನ್ನು ಗುರುತಿಸಿ ಪ್ರತಿವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ನಗದು ಹಾಗೂ ಫಲಕವನ್ನು ಒಳಗೊಂಡಿದೆ.

ವನಸುಮ ಜೇಸಿ ಸಪ್ತಾಹದ ಅಂಗವಾಗಿ ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಹಾಗೂ ವನಸುಮ ವೇದಿಕೆಯ ವತಿಯಿಂದ ಅನ್ಯೋನ್ಯ ದಂಪತಿ ಸ್ಪರ್ಧೆ ಆಯೋಜಿಸಲಾಗಿತ್ತು.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ಸ್ಪರ್ಧೆಯನ್ನು ವನಸುಮ ಟ್ರಸ್ಟ್ ಅಧ್ಯಕ್ಷ ಬಾಸುಮ ಕೊಡಗು ನಡೆಸಿಕೊಟ್ಟರು. ಜೇಸಿ ಅಧ್ಯಕ್ಷೆ ಪಲ್ಲವಿ ಕೊಡಗು ಹಾಗೂ ಸದಸ್ಯರು ಸ್ಪರ್ಧೆಯನ್ನು ನಿರ್ವಹಿಸಿದರು. ಕಾವ್ಯವಾಣಿ ಕೊಡಗು ಹಾಗೂ ಜಯರಾಮ್ ತೀರ್ಪುಗಾರರಾಗಿ ಸಹಕರಿಸಿದರು.
ಸುಮಾರು 30 ದಂಪತಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಥಮ ಬಹುಮಾನ ರೂ.30,000 ಅನ್ನು ಶೃತಿ ಪ್ರದೀಪ್ ಹಾಗೂ ಪ್ರದೀಪ್ ದಂಪತಿ, ದ್ವಿತೀಯ ಬಹುಮಾನ ರೂ.20,000 ಅನ್ನು ಜ್ಞಾನಶೀಲ ಹಾಗೂ ಶ್ರೀನಿವಾಸ್ ದಂಪತಿ, ತೃತೀಯ ಬಹುಮಾನ ರೂ.10,000 ಅನ್ನು ಪಲ್ಲವಿ ಹಾಗೂ ರೋಹಿತ್ ದಂಪತಿ ಪಡೆದುಕೊಂಡರು.
ಇದಲ್ಲದೆ ಮೆಚ್ಚುಗೆ ಬಹುಮಾನ ಸೇರಿದಂತೆ ವಿವಿಧ ಬಹುಮಾನಗಳನ್ನು ವಿಜೇತರಿಗೆ ನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments