ಕರಾವಳಿಯ ಹೆಮ್ಮೆಯ ಜಾನಪದ ಕಲೆಯಾದ ಹುಲಿವೇಷದ ರೋಚಕತೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಸಾರುವ ‘ಎಂಕ್ಲೆನ ಪಿಲಿ – ನಮ್ಮ ಹುಲಿ’ ಸಾಕ್ಷ್ಯಚಿತ್ರದ ಪ್ರಥಮ ಪ್ರದರ್ಶನ ಮಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿತು.
ಮಂಗಳೂರಿನ ಭರತ್ ಸಿನಿಮಾಸ್‌ನಲ್ಲಿ ‘ಎಂಕ್‌ಲೆನ ಪಿಲಿ – ನಮ್ಮ ಹುಲಿ’ ಸಾಕ್ಷ್ಯಚಿತ್ರದ ಪ್ರಥಮ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ತುಳುನಾಡು ಸಾಂಸ್ಕೃತಿಕ ಸಮುದಾಯದ ಸದಸ್ಯರು, ಹಿರಿಯರು, ಕಲಾಪೋಷಕರು ಹಾಗೂ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಪ್ರದರ್ಶನವನ್ನು ಉದ್ಘಾಟಿಸಿ ಟೈಟಲ್ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು. ತುಳುನಾಡಿನ ಸಂಪ್ರದಾಯಕ್ಕೆ ಅದರದ್ದೇ ಆದ ಮಹತ್ವ ಇದೆ. ಈ ಸಾಕ್ಷ್ಯಚಿತ್ರವು ಎಲ್ಲರ ಮೆಚ್ಚುಗೆಯನ್ನು ಪಡೆದು ನಮ್ಮ ಕಲೆ, ಸಂಪ್ರದಾಯ ಜಗತ್ತಿನಾದ್ಯಂತ ಪಸರಿಸಲಿ ಎಂದರು.
‘ಕಾಂತಾರ’ ಚಿತ್ರದ ಮೂಲಕ ಖ್ಯಾತಿ ಪಡೆದ ಕಲಾವಿದ ಮೈಮ್ ರಾಮದಾಸ್ ನಿರೂಪಣೆಯ ಈ ಸಾಕ್ಷ್ಯಚಿತ್ರವು ಹುಲಿವೇಷದ ಮೂಲ, ವಿಕಾಸ ಹಾಗೂ ಈ ಕಲೆಯನ್ನು ತಲೆತಲಾಂತರಗಳಿಂದ ಜೀವಂತವಾಗಿಟ್ಟಿರುವ ಕಲಾವಿದರ ಬದುಕನ್ನು ಅನಾವರಣಗೊಳಿಸುತ್ತದೆ.ಗಂಟೆಗಟ್ಟಲೆ ಬಿಸಿಲಿನಲ್ಲಿ ಮೈತುಂಬ ಬಣ್ಣ ಬಳಿದು ಹುಲಿವೇಷದ ನೃತ್ಯ ಮಾಡುವ ಕಲಾವಿದರ ದೈಹಿಕ ಶ್ರಮ ಹಾಗೂ ಪರಿಶ್ರಮವನ್ನು ಸಾಕ್ಷ್ಯಚಿತ್ರದಲ್ಲಿ ನೈಜವಾಗಿ ಕಟ್ಟಿಕೊಡಲಾಗಿದೆ.
ಈ ಚಿತ್ರದಲ್ಲಿ ಪ್ರಮುಖವಾಗಿ ಮಾಜಿ ಕಾರ್ಪೋರೇಟರ್ ಬಜಿಲಕೇರಿ ಕಮಲಾಕ್ಷ ಅವರ ಕುಟುಂಬವು ಸುಮಾರು 100 ವರ್ಷಗಳಿಂದ ಹುಲಿವೇಷದಲ್ಲಿ ಪಾಲ್ಗೊಳ್ಳುತ್ತಿದೆ. ನಿರ್ದೇಶಕ ಶ್ರೀಜಿತ್ ಕಾಮತ್ ಅವರೊಂದಿಗೆ ಕಮಲಾಕ್ಷ ನಡೆಸಿದ ಸಂಭಾಷಣೆಗಳು ಸಾಕ್ಷ್ಯಚಿತ್ರ ರೂಪುಗೊಳ್ಳುವಿಕೆಗೆ ನೆರವಾಗಿದೆ.
ಸಾಕ್ಷ್ಯಚಿತ್ರವನ್ನು ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಬೂಸಾನ್ ಹಾಗೂ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಕೊಂಡೊಯ್ಯುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ಒಟಿಟಿ ವೇದಿಕೆಗಳ ಮೂಲಕ ಜಾಗತಿಕ ವೀಕ್ಷಕರಿಗೆ ತಲುಪಿಸುವ ಪ್ರಯತ್ನವೂ ನಡೆಯುತ್ತಿದೆ.
ಕರಾವಳಿಯ ವಿಶಿಷ್ಟ ಜಾನಪದ ಸಂಪ್ರದಾಯವಾದ ಹುಲಿವೇಷದ ಸಾಂಸ್ಕೃತಿಕ ಮಹತ್ವವನ್ನು ಜಗತ್ತಿನಾದ್ಯಂತ ಪರಿಚಯಿಸುವ ಉದ್ದೇಶದಿಂದ ‘ಎಂಕ್ಲೆನ ಪಿಲಿ – ನಮ್ಮ ಹುಲಿ’ ಸಾಕ್ಷ್ಯಚಿತ್ರವನ್ನು ರೂಪಿಸಲಾಗಿದೆ.

